ಚುನಾವಣಾ ಆಯೋಗ ಬಿಜೆಪಿ ಪರವಾಗಿ ವರ್ತಿಸುತ್ತಿರುವುದು ಖಂಡನಾರ್ಹ : ಸಂಸದ ಸಾಗರ್ ಖಂಡ್ರೆ

ಬೀದರ್ : ಕಾಂಗ್ರೆಸ್ ಪಕ್ಷ ಕೇಳಿರುವ ಡಿಜಿಟಲ್ ಡೇಟಾ ನೀಡದೆ ಚುನಾವಣಾ ಆಯೋಗ ಬಿಜೆಪಿ ಪರವಾಗಿ ವರ್ತಿಸುತ್ತಿರುವುದು ಖಂಡನಾರ್ಹವಾಗಿದೆ ಎಂದು ಸಂಸದ ಸಾಗರ್ ಖಂಡ್ರೆ ಅವರು ತಿಳಿಸಿದರು.
ಗುರುವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಮತ್ತು ವೋಟ್ ಚೋರಿ ಹಸ್ತಾಕ್ಷರ ಅಭಿಯಾನದ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿಗಳು ಇಡೀ ದೇಶವನ್ನೇ ಡಿಜಿಟಲ್ ಇಂಡಿಯವನ್ನಾಗಿ ಬದಲಿಸಲು ಹೊರಟಾಗ, ಚುನಾವಣೆ ಆಯೋಗ ಅದರ ತದ್ವಿರುದ್ಧವಾಗಿ ನಡೆದು ಕಾಂಗ್ರೆಸ್ ಪಕ್ಷ ಕೇಳಿರುವ ಡಿಜಿಟಲ್ ಡೇಟಾವನ್ನು ಹಸ್ತಾಂತರ ಮಾಡದಿರುವದು ನಿಜಕ್ಕೂ ಹಾಸ್ಯಸ್ಪದವಾಗಿದೆ ಎಂದು ಗುಡುಗಿದರು.
ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮತದಾನ ಕಳ್ಳತನದ ಬಗ್ಗೆ ಹಲವಾರು ರೀತಿಯ ದಾಖಲೆಗಳೊಂದಿಗೆ ಸಾಕ್ಷಿ ಸಮೇತ ಸಾಬೀತು ಪಡಿಸಿದ ನಂತರವೂ, ಚುನಾವಣೆ ಆಯೋಗ ಉಡಾಫೆ ಉತ್ತರ ನೀಡಿರುವದು ಖಂಡನೀಯವಾಗಿದೆ ಎಂದರು.
ರಾಹುಲ್ ಗಾಂಧಿ ಅವರು ರಾಜ್ಯದ ಮಹಾದೇವಪುರ್ ಮತಕ್ಷೇತ್ರದಲ್ಲಿ ನಡೆದ ಮತ ಕಳ್ಳತನದ ಬಗ್ಗೆ ದಾಖಲೆ ಸಮೇತ ಇಡೀ ದೇಶಕ್ಕೆ ಮನವರಿಕೆ ಮಾಡಿ ಕೊಟ್ಟು, ಚುನಾವಣಾ ಆಯೋಗಕ್ಕೆ ಕೆಲವು ಮಹತ್ವದ ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಚುನಾವಣೆ ಆಯೋಗ ಉಡಾಫೆಯ ಹೇಳಿಕೆ ನೀಡಿರುವುದನ್ನು ನಾನು ಖಂಡಿಸುತ್ತೇನೆ ಎಂದು ಕಿಡಿಕಾರಿದರು.
ಕಾರ್ಯಕರ್ತರ ಅಸಮಾಧಾನ : ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹುಮನಾಬಾದ್ ಬ್ಲಾಕ್ ಕಾಂಗ್ರೆಸ್ ನ ಓಂಕಾರ್ ತುಂಬಾ ಅವರು ಮಾತನಾಡಿ, ಬಿಜೆಪಿಯ ಜಿಲ್ಲಾಧ್ಯಕ್ಷರು ಹೇಳಿಕೆ ಮೇಲೆ ಹೇಳಿಕೆ ನೀಡುತ್ತಾರೆ. ಹಾಗಾಗಿ ಅವರು ಹೇಳಿಕೆಗೆ ನಮ್ಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಪ್ರತ್ತ್ಯುತ್ತರ ನೀಡುತ್ತಿಲ್ಲ. ಸುಮಾರು 3 ವರ್ಷದಿಂದ ಹುಮನಾಬಾದ್ ನಲ್ಲಿ ಬೇರೆ ರಾಜಕೀಯ ನಡೆಯುತ್ತಿದೆ. ಅದರ ಬಗ್ಗೆನೂ ತಾವು ಯಾವುದೇ ಹೇಳಿಕೆ ನೀಡಲಿಲ್ಲ. ನಮ್ಮ ಕಾರ್ಯಕರ್ತರನ್ನು ಹುರಿದುಂಬಿಸಿ, ನಾವು ಜನಮಾನಸದಲ್ಲಿ ಉಳಿಯಬೇಕೆಂದರೆ ನಿಮ್ಮ ಪ್ರತಿಕ್ರಿಯೆಗಳು ತುಂಬಾ ಮುಖ್ಯವಾಗುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅಮೃತರಾವ್ ಚಿಮಕೋಡ್ , ಹಣಮಂತರಾವ್ ಚೌವ್ಹಾಣ, ಜಾನ್ ವೇಸ್ಲಿ, ವಿನೋದ್ ಅಪ್ಪೆ, ಸಚಿನ್, ಯುವ ಕಾಂಗ್ರೆಸ್ ನ ಮುಖಂಡರು, ಮಹಿಳಾ ಕಾಂಗ್ರೆಸ್, NSUI ಮುಂಚೂಣಿ ಘಟಕದ ಅಧ್ಯಕ್ಷರು ಹಾಗೂ ಪಕ್ಷದ ಅನೇಕ ಮುಖಂಡರು ಉಪಸ್ಥಿತರಿದ್ದರು.







