ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರ ವಹಿಸಿ: ಶಾಸಕ ಪ್ರಭು ಚವ್ಹಾಣ್

ಔರಾದ್: ಎಸ್‌ಐಆರ್ ಪ್ರಕ್ರಿಯೆಯ ಮೊದಲ ಹಂತ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಅರ್ಹ ನಾಗರಿಕರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಕಾರ್ಯಕರ್ತರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಭಾನುವಾರ ಆಯೋಜಿಸಿದ್ದ ಬಿಎಲ್‌ಎ-2 ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್‌ಐಆರ್‌ನ ಮೊದಲ ಹಂತ ಪೂರ್ಣಗೊಂಡಿದ್ದು, ಇದೀಗ ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಬಿಎಲ್‌ಎ-2ಗಳು ತಮ್ಮ ವ್ಯಾಪ್ತಿಯ ಮತದಾರರ ಮಾಹಿತಿಯನ್ನು ಪರಿಶೀಲಿಸಿ, ಅರ್ಹ ಮತದಾರರ ಹೆಸರುಗಳು ಕರಡು ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಮತದಾನ ಕೇವಲ ಹಕ್ಕಲ್ಲ, ದೇಶದ ಭವಿಷ್ಯವನ್ನು ರೂಪಿಸುವ ಜವಾಬ್ದಾರಿಯೂ ಆಗಿದೆ. ಪ್ರತಿಯೊಂದು ಮತವೂ ಜನಪ್ರತಿನಿಧಿಗಳ ಆಯ್ಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ಅರ್ಹ ಪ್ರತಿಯೊಬ್ಬ ನಾಗರಿಕರು ಮತದಾರರ ಪಟ್ಟಿಯಲ್ಲಿ ಇರುವಂತೆ ಜಾಗೃತಿ ಮೂಡಿಸುವುದು ಕಾರ್ಯಕರ್ತರ ಪ್ರಮುಖ ಕರ್ತವ್ಯವಾಗಿದೆ ಎಂದರು.
ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟಿದ್ದರೆ, ನಿಯಮಾನುಸಾರ ಅಗತ್ಯ ಅರ್ಜಿ ಅಥವಾ ಆಕ್ಷೇಪಣೆ ಸಲ್ಲಿಸಿ ಹೆಸರು ಸೇರ್ಪಡೆಗೆ ಸಹಕರಿಸಬೇಕು. ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಎಸ್‌ಐಆರ್ ಪ್ರಕ್ರಿಯೆಯ ಭಾಗವಾಗಿ ಎನ್ಯೂಮರೇಷನ್ ಅರ್ಜಿಗಳನ್ನು ಮನೆ ಮನೆಗೆ ತಲುಪಿಸಿ ಭರ್ತಿ ಮಾಡಿಸಿ ಸಲ್ಲಿಸುವಲ್ಲಿ ಪಕ್ಷದ ಕಾರ್ಯಕರ್ತರು ಸಲ್ಲಿಸಿರುವ ಸೇವೆ ಶ್ಲಾಘನೀಯ. ಮುಂದೆಯೂ ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯ ಪರಿಶೀಲನೆ ಹಾಗೂ ಅಗತ್ಯ ತಿದ್ದುಪಡಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಹೊರ ಜಿಲ್ಲೆಗಳಿಗೆ ತೆರಳಿರುವ ಮತದಾರರ ಮೇಲೂ ನಿಗಾ :
ಔರಾದ್ ಕ್ಷೇತ್ರದ ಅನೇಕರು ಉದ್ಯೋಗಕ್ಕಾಗಿ ಮುಂಬೈ, ಪುಣೆ, ಉದಗೀರ್, ಲಾತೂರ್ ಹಾಗೂ ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಿಗೆ ತೆರಳಿದ್ದಾರೆ. ಎಸ್‌ಐಆರ್ ಕುರಿತು ಮಾಹಿತಿ ಇಲ್ಲದಿರುವುದರಿಂದ ಅಂತಹ ಕೆಲವರು ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಆದ್ದರಿಂದ ಅವರನ್ನು ಗುರುತಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಅಥವಾ ಸೇರ್ಪಡೆಗೊಳಿಸಲು ಅಗತ್ಯ ಸಹಕಾರ ನೀಡಬೇಕು ಎಂದು ಪ್ರಭು ಚವ್ಹಾಣ ಹೇಳಿದರು.
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ, ಅಗತ್ಯಕ್ಕೆ ಅನುಗುಣವಾಗಿ ಸಂಬಂಧಪಟ್ಟ ನಮೂನೆಗಳನ್ನು ಸಲ್ಲಿಸಿ ಹೆಸರು ಸೇರ್ಪಡೆ, ಆಕ್ಷೇಪಣೆ ಅಥವಾ ತಿದ್ದುಪಡಿಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್, ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಪ್ರಶಿಕ್ಷಣ ಪ್ರಕೋಷ್ಟದ ರಾಜ್ಯ ಸಂಚಾಲಕ ರಾಜಶೇಖರ್ ನಾಗಮೂರ್ತಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಉಪಾಧ್ಯಕ್ಷ ಅರಹಂತ್ ಸಾವಳೆ, ಬಾಬುರಾವ್ ಕಾರಬಾರಿ, ಚಂದ್ರಶೇಖರ್ ಪಾಟೀಲ, ವಸಂತ್ ಬಿರಾದಾರ್, ಧೊಂಡಿಬಾ ನರೋಟೆ, ರಂಗರಾವ್ ಜಾಧವ್, ಶಿವಾನಂದ್ ವಡ್ಡೆ, ನಿಲೇಶ್, ಶಿವರಾಜ್ ಅಲ್ಮಾಜೆ, ಖಂಡೋಬಾ ಕಂಗಟೆ, ಪ್ರಕಾಶ್ ಅಲ್ಮಾಜೆ, ಬಾಬುರಾವ್ ವಾಡಿ, ಪ್ರವೀಣ್ ಕಾರಬಾರಿ, ಸಾಗರ್ ಪಾಟೀಲ್, ಶಿವಕುಮಾರ್ ಪಾಂಚಾಳ್, ರಾಜಶೇಖರ್ ಶೆಳ್ಕೆ, ಗಣೇಶ್ ಕಾರೆಗಾವೆ, ಮಲ್ಲಪ್ಪ ದಾನಾ, ಅಶೋಕ್ ಅಲ್ಮಾಜೆ, ಯೋಗೇಶ್ ಪಾಟೀಲ್, ಬಂಟಿ ರಾಂಪೂರೆ, ಉದಯ್ ಸೋಲಾಪೂರೆ, ಪ್ರಕಾಶ್ ಜೀರ್ಗೆ, ರಾಜಕುಮಾರ್ ಸೋರಾಳೆ ಹಾಗೂ ಸಂಜು ಮುರ್ಕೆ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.






