ಬೀದರ್ | ಕ್ರಿಶ್ಚಿಯನ್ ಸಮಾಜದ ವಿರುದ್ಧ ಸುಳ್ಳು ಆರೋಪ : ಕ್ರಮಕ್ಕಾಗಿ ಮನವಿ

ಬೀದರ್ : ಕ್ರಿಶ್ಚಿಯನ್ ಸಮಾಜದ ಅಭಿವೃದ್ದಿ ಯೋಜನೆಗಳ ಮೇಲೆ ಯಾವುದೇ ಸಾಕ್ಷ್ಯವಿಲ್ಲದೆ ಭಾರತೀಯ ಜನತಾ ಪಾರ್ಟಿಯ ಎಸ್ಸಿ ಮೋರ್ಚಾ ಬೀದರ್ ಘಟಕದ ಅಧ್ಯಕ್ಷ ರವಿ ನಿಜಾಂಪುರೆ ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲೆಯ ಕ್ರಿಶ್ಚಿಯನ್ ಮುಖಂಡರು ಮನವಿ ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಹಕ್ಕುಗಳ ಸಮಿತಿಯ ರಾಜ್ಯಾಧ್ಯಕ್ಷ ಅನೀಲ್ ಜಾಧವ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ರವಿ ನಿಜಾಂಪುರೆ ಅವರು ಕ್ರಿಶ್ಚಿಯನ್ ಸಮಾಜದ ಅಭಿವೃದ್ದಿ ಯೋಜನೆಗಳ ಮೇಲೆ ಯಾವುದೇ ಸಾಕ್ಷ್ಯವಿಲ್ಲದೆ ಸುಳ್ಳು ಆರೋಪಗಳು ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಕಳೆದ 13 ವರ್ಷಗಳಲ್ಲಿ ಕ್ರಿಶ್ಚಿಯನ್ ಸಮಾಜಕ್ಕೆ ಕೇವಲ 120 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಆದರೆ ಅವರು 400 ಕೋಟಿ ರೂ. ದುರುಪಯೋಗವಾಗಿದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಈ ಆರೋಪ ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಲಾಗಿದೆ.
ಇಂತವರ ಚಟುವಟಿಕೆಗಳಿಂದ ಕ್ರಿಶ್ಚಿಯನ್ ಸಮಾಜದ ಅಭಿವೃದ್ದಿ ಯೋಜನೆಗಳಲ್ಲಿ ವಿಳಂಬವಾಗುತ್ತಿದ್ದು, ಕೋಮು ಗಲಭೆ ಉಂಟು ಮಾಡುವ ಹುನ್ನಾರ ನಡೆಸಲು ಸಂಚು ರೂಪಿಸುತ್ತಿದ್ದಾರೆ. ಇಂತಹ ಸಮಾಜ ಘಾತುಕ ಶಕ್ತಿಗಳ ಚಟುವಟಿಕೆಗಳಿಗೆ ಅವಕಾಶ ನೀಡದೆ, ಸಮಾಜದಲ್ಲಿ ಅಶಾಂತಿ ಮೂಡಿಸುವ ಇಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಕ್ರಿಶ್ಚಿಯನ್ ಸಮುದಾಯದ ಮುಖಂಡರಾದ ಹೆನ್ರಿ, ರೋಹನ್, ಜಾನ್ ಹಾಗೂ ರಾಹುಲ್ ಉಪಸ್ಥಿತರಿದ್ದರು.







