ಬೀದರ್ | ಸಚಿವ ಈಶ್ವರ್ ಖಂಡ್ರೆ ಭರವಸೆ ಬಳಿಕ ಸತ್ಯಾಗ್ರಹ ಕೈಬಿಟ್ಟ ರೈತರು

ಬೀದರ್ : ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರ ಭರವಸೆ ಮೇರೆಗೆ ನಗರದ ಅಂಬೇಡ್ಕರ್ ವೃತ್ತದಲ್ಲಿ 7 ದಿನದಿಂದ ಪ್ರತಿಭಟನೆ ಕುಳಿತ ರೈತರು ಶನಿವಾರ ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಗರದಲ್ಲಿ ರೈತ, ಕಾರ್ಮಿಕ, ದಲಿತ ಮತ್ತು ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ 7 ದಿವಸದಿಂದ ನಿರಂತರ ಪ್ರತಿಭಟನೆ ನಡೆಸಲಾಗುತ್ತಿತ್ತು. ಇದೀಗ ಈಶ್ವರ್ ಖಂಡ್ರೆ ಅವರ ಭರವಸೆ ಮೇರೆಗೆ ಪ್ರತಿಭಟನೆ ಕೈ ಬಿಟ್ಟಿದ್ದಾರೆ.
ಮಳೆಯಿಂದ ನಷ್ಟವಾದ ಬೆಳೆ ಸಮೀಕ್ಷೆ ಇನ್ನು ಸಂಪೂರ್ಣವಾಗಿ ಆಗಿಲ್ಲ. ಸಮೀಕ್ಷೆ ಇನ್ನು ಜಾರಿಯಲ್ಲಿದೆ. ಆಯಾ ಪಂಚಾಯತ್ ನಲ್ಲಿ ಬೆಳೆ ಸಮೀಕ್ಷೆ ನಡೆದ ರೈತರ ಪಟ್ಟಿಯನ್ನು ಹಚ್ಚಲಾಗುವುದು. ಯಾವ ರೈತರ ಬೆಳೆ ಸಮೀಕ್ಷೆ ಇನ್ನು ನಡೆದಿಲ್ಲವೋ ಆ ರೈತರು ಮಾಹಿತಿ ನೀಡಿದಲ್ಲಿ ಅವರ ಸಮೀಕ್ಷೆ ನಡೆಸಲಾಗಿವುದು. ಇದಕ್ಕೆ ಐದು ದಿನದ ಸಮಯ ನೀಡಲಾಗುವುದು. ನಂತರ ಸರ್ಕಾರ ನಿಗದಿ ಮಾಡಿದ ಪರಿಹಾರ ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಬಿ ಎಸ್ ಎಸ್ ಕೆ ಕಾರ್ಖಾನೆಯು ತುಂಬಾ ನಷ್ಟದಲ್ಲಿದ್ದು, ಅದನ್ನು ಪುನರ್ ಪ್ರಾರಂಭ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ಸಾಲ ಮನ್ನಾದ ಬೇಡಿಕೆಯನ್ನು ಬಜೆಟ್ ಗಿಂತ ಮುಂಚೆ ರೈತರ ಆಯೋಗವೊಂದು ರಚಿಸಿ ಮುಖ್ಯಮಂತ್ರಿಗಳ ಹತ್ತಿರ ಕರೆದುಕೊಂಡು ಹೋಗಿ ಚರ್ಚೆ ಮಾಡಲಾಗುವುದು. ನರೇಗಾ ಕಾಮಗಾರಿಗೆ ಜಿಲ್ಲಾ ಪಂಚಾಯತ್ ನಲ್ಲಿ ಬಜೆಟ್ ಇಡಲಾಗುವುದು ಎಂದು ಅವರು ಭರವಸೆ ನೀಡಿದರು.
ಈ ಭರವಸೆಗಳನ್ನು ಒಪ್ಪಿಕೊಂಡು ರೈತರು ತಮ್ಮ ಧರಣಿಯನ್ನು ಕೈಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಹತ್ತಿರ ಹೋಗಿ ಸಾಲ ಮನ್ನಾ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ರೈತ ಮುಖಂಡರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಬುಡಾ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಪ್ರತಿಭಟನಾಕಾರರಾದ ಮಲ್ಲಿಕಾರ್ಜುನ್ ಸ್ವಾಮಿ, ಬಾಬುರಾವ್ ಹೊನ್ನಾ, ಖಾಸಿಂ ಅಲಿ, ರುದ್ರಯ್ಯಾ ಸ್ವಾಮಿ, ವೀರಾರೆಡ್ಡಿ ಪಾಟೀಲ್, ನಜೀರ್ ಅಹ್ಮದ್, ವಿಠ್ಠಲ್ ರೆಡ್ಡಿ, ಶಾಂತಮ್ಮ ಮೂಲಗೆ, ಕಮಲಬಾಯಿ ಮಡ್ಡೆ, ಎಂ.ಡಿ.ಶಫಾಯತ್ ಅಲಿ, ಶೀಲಾ ಸಾಗರ್, ವಿಜಯಕುಮಾರ್ ಬಾವಗೆ, ಗುಂಡೇರಾವ್ ಕುಲಕರ್ಣಿ, ನಾಗಶೆಟ್ಟಪ್ಪ ಲಂಜವಾಡೆ ಹಾಗೂ ಬಸವರಾಜ್ ಅಷ್ಟೂರ್ ಸೇರಿದಂತೆ ಇತರರು ಇದ್ದರು.







