ಸೋಯಾಬೀನ್ ಬಿತ್ತನೆ ಬೀಜ ಪೂರೈಕೆ, ರೈತರು ಆತಂಕ ಪಡುವ ಅಗತ್ಯವಿಲ್ಲ: ಸಚಿವ ಈಶ್ವರ್ ಖಂಡ್ರೆ

ಬೀದರ್ : ಸೋಯಾಬೀನ್ ಬಿತ್ತನೆ ಬೀಜ ಪೂರೈಕೆ ಮಾಡಲಾಗುತ್ತಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಹೇಳಿದ್ದಾರೆ.
ಜಿಲ್ಲೆಯ ರೈತರು ಬಿತ್ತನೆ ಬೀಜದ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿ ಉತ್ತಮ ಮುಂಗಾರು ಮಳೆಯಿಂದಾಗಿ ಬೀಜದ ಬೇಡಿಕೆ ಹೆಚ್ಚಿದೆ. ಇದಕ್ಕೆ ಅನುಗುಣವಾಗಿ ಜಿಲ್ಲೆಗೆ ಒಟ್ಟು 1,02,500 ಕ್ವಿಂಟಾಲ್ ಸೋಯಾಬೀನ್ ಬೀಜ ಮಂಜೂರು ಮಾಡಲಾಗಿದೆ. ಇದರಲ್ಲಿ ಈಗಾಗಲೇ 87,500 ಕ್ವಿಂಟಾಲ್ ಬೀಜ ವಿತರಣೆಯಾಗಿದ್ದು, ಇನ್ನೂ 15,000 ಕ್ವಿಂಟಾಲ್ ಬೀಜಗಳು ಜಿಲ್ಲೆಗೆ ರವಾನೆ ಮಾಡಲಾಗಿದೆ. ಈ ಬೀಜಗಳು ಮುಂದಿನ 2, 3 ದಿನಗಳಲ್ಲಿ ರೈತರಿಗೆ ಲಭ್ಯವಾಗಲಿವೆ ಎಂದು ಅವರು ತಿಳಿಸಿದ್ದಾರೆ.
ರೈತರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ಹೆಚ್ಚಿದ ಬೀಜದ ಬೇಡಿಕೆಯನ್ನು ಮನದಟ್ಟಿಸಿಕೊಂಡು, ನಾನು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ. ಇವಾಗ ಹೆಚ್ಚುವರಿಯಾಗಿ 15,000 ಕ್ವಿಂಟಾಲ್ ಬೀಜವನ್ನು ಮಾರುಕಟ್ಟೆಯಿಂದ ಖರೀದಿ ಮಾಡಿ ರೈತರಿಗೆ ವಿತರಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಶೀಘ್ರವೇ ಉಳಿದ ಬೀಜವೂ ಜಿಲ್ಲೆಗೆ ತಲುಪಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.





