ರಾಜ್ಯದ ಕಾಳಸಂತೆಯಲ್ಲಿ ಯೂರಿಯಾ, ಡಿಎಪಿ ರಸಗೊಬ್ಬರ ಮಾರಾಟದಿಂದ ರೈತರಲ್ಲಿ ಹಾಹಾಕಾರ : ಭಗವಂತ್ ಖೂಬಾ ಆರೋಪ

ಬೀದರ್ : ಕೇಂದ್ರ ಸರ್ಕಾರದಿಂದ ಬಿತ್ತನೆಗಾಗಿ ಯೂರಿಯಾ ರಸಗೊಬ್ಬರ ಕಳುಹಿಸಿದರೂ ಕೂಡ ರಾಜ್ಯ ಕಾಂಗ್ರೆಸ್ ಸರ್ಕಾರ ಕೃತಕ ಅಭಾವ ಸೃಷ್ಟಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದೆ. ಇದರಿಂದಾಗಿ ರೈತರಲ್ಲಿ ಹಾಹಾಕಾರ ಎದ್ದಿದೆ. ಇದು ಕೂಡಲೇ ನಿಲ್ಲಬೇಕು. ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ವಿತರಣೆ ಮಾಡಬೇಕು ಎಂದು ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ವರ್ಷದ ಖರೀಫ್ ಬೆಳೆಗಳಿಗಾಗಿ ರಾಜ್ಯಕ್ಕೆ ಯೂರಿಯಾ ರಸಗೊಬ್ಬರ 11 ಲಕ್ಷ 17 ಮೆಟ್ರಿಕ್ ಟನ್ ಬೇಕಿದೆ. ಕೇಂದ್ರ ಸರ್ಕಾರ ಇಲ್ಲಿವರೆಗೆ 8 ಲಕ್ಷ 73 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಕಳುಹಿಸಿದೆ. ಇದರಲ್ಲಿ ಮಾರಾಟ ಮಾಡಿರುವುದು 7 ಲಕ್ಷ 8 ಸಾವಿರ ಮೆಟ್ರಿಕ್ ಟನ್ ಮಾತ್ರ. ರಾಜ್ಯದಲ್ಲಿ ಇವತ್ತಿಗೂ ಕೂಡ ಯೂರಿಯಾ 1 ಲಕ್ಷ 65 ಸಾವಿರ ಮೆಟ್ರಿಕ್ ಟನ್ ಗೋದಾಮುಗಳಲ್ಲಿ ಲಭ್ಯವಿದೆ. 7,921 ಮೆಟ್ರಿಕ್ ಟನ್ ಸಾಗಣೆಯಲ್ಲಿ ಇದೆ. ಹಾಗಿದ್ದಲ್ಲಿ ಇಂದಿಗೂ ಕೂಡ ರಾಜ್ಯದ ರೈತರಿಗೆ 1 ಲಕ್ಷ 73 ಸಾವಿರ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಲಭ್ಯವಿದೆ ಎಂದು ಅವರು ತಿಳಿಸಿದರು.
ಡಿಎಪಿ ರಸಗೊಬ್ಬರ ಈ ವರ್ಷದ ಖರೀಫ್ ಬೆಳೆಗಳಿಗಾಗಿ 4 ಲಕ್ಷ ಮೆಟ್ರಿಕ್ ಟನ್ ಬೇಕಾಗಿದೆ. ಅದರಲ್ಲಿ ಕೇಂದ್ರ ಸರ್ಕಾರ ಇಲ್ಲಿವರೆಗೆ 2 ಲಕ್ಷ 95 ಸಾವಿರ ಮೆಟ್ರಿಕ್ ಟನ್ ಕಳುಹಿಸಿದೆ. ರಾಜ್ಯ ಸರ್ಕಾರ ಇಂದಿನವರೆಗೆ 2 ಲಕ್ಷ 24 ಸಾವಿರ ಮೆಟ್ರಿಕ್ ಟನ್ ಮಾರಾಟ ಮಾಡಿದೆ. ಇಂದಿಗೂ ಕೂಡ ಗೋದಾಮಿನಲ್ಲಿ 71 ಸಾವಿರ ಮೆಟ್ರಿಕ್ ಟನ್ ಡಿಎಪಿ ರಸಗೊಬ್ಬರ ಲಭ್ಯವಿದೆ. 12, 694 ಮೆಟ್ರಿಕ್ ಟನ್ ಸಾಗಾಣಿಕೆಯಲ್ಲಿದೆ ಎಂದು ಅವರು ಮಾಹಿತಿ ನೀಡಿದರು.
ಇಷ್ಟಾದರೂ ಕೂಡ ಕಾಂಗ್ರೆಸ್ ಸರ್ಕಾರ ರಸಗೊಬ್ಬರದ ಕೃತಕ ಅಭಾವವನ್ನು ಸೃಷ್ಟಿ ಮಾಡಿ, ಪ್ರತಿಯೊಂದು ಯೂರಿಯಾ ರಸಗೊಬ್ಬರದ ಬ್ಯಾಗಿಗೆ ಹೆಚ್ಚಳವಾಗಿ ಒಂದು ನೂರು ರೂಪಾಯಿ ಪಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಆರೋಪಿಸಿದ ಅವರು, ರಸಗೊಬ್ಬರದ ಕೃತಕ ಅಭಾವವನ್ನು ಉಂಟುಮಾಡುತ್ತಿರುವುದು ತಡೆದು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಬಿಜೆಪಿಯ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಹಿಂದೆ ಬಿಜೆಪಿಯು ರೈತರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾನಿಧಿ ವಿದ್ಯಾರ್ಥಿ ವೇತನ ಬಂದ್ ಮಾಡಿದೆ. 52 ಲಕ್ಷ ರೈತರಿಗೆ ವರ್ಷದಲ್ಲಿ 4 ಸಾವಿರ ರೂ. ಹಣ ಬಿಜೆಪಿ ಸರ್ಕಾರ ನೀಡುತಿತ್ತು. ಅದನ್ನು ಕಾಂಗ್ರೆಸ್ ಸರ್ಕಾರ ಬಂದ್ ಮಾಡಿದೆ. ಕೇಂದ್ರದಿಂದ ಬಂದ ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್ ಹಣವು ಕೂಡ ರಾಜ್ಯ ಸರ್ಕಾರ ರೈತರಿಗೆ ನೀಡಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ 3,400 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಬಾವಿ, ಬೋರವೆಲ್ ಗೆ ಕೂಡಿಸುವ ಟ್ರಾನ್ಸ್ ಫಾರ್ಮರ್ ಬಿಜೆಪಿ ಅವಧಿಯಲ್ಲಿ ಕೇವಲ 25 ಸಾವಿರ ರೂ. ಗೆ ಮಾತ್ರ ನೀಡಲಾಗುತಿತ್ತು. ಕಾಂಗ್ರೆಸ್ ಸರ್ಕಾರದಲ್ಲಿ ಅದನ್ನು 3 ಲಕ್ಷ ರೂ. ಗೆ ಏರಿಸಿದೆ ಎಂದು ಗುಡುಗಿದರು.
ಈ ಸಂದರ್ಭದಲ್ಲಿ ಮಾಜಿ ಬುಡಾ ಅಧ್ಯಕ್ಷ ಬಾಬು ವಾಲಿ, ಪ್ರಮುಖರಾದ ಶಿವರಾಜ್ ಅಲ್ಮಾಜೆ, ಫರ್ನಾಂಡಿಸ್, ಶ್ರೀನಿವಾಸ್ ಚೌಧರಿ ಮತ್ತು ಸಂತೋಷ್ ರೆಡ್ಡಿ ಆಣದೂರ್ ಉಪಸ್ಥಿತರಿದ್ದರು.







