ಮಾಜಿ ಸಚಿವ ಡಾ.ಭೀಮಣ್ಣ ಖಂಡ್ರೆ ನಿಧನ

ಬೀದರ್ : ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಡಾ.ಭೀಮಣ್ಣ ಖಂಡ್ರೆ (102) ಅವರು ವಯೋಸಹಜ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಡಾ.ಭೀಮಣ್ಣ ಖಂಡ್ರೆ ಅವರು ಸುಮಾರು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಒಂದು ವಾರದಿಂದ ಉಸಿರಾಟದ ತೊಂದರೆ ಹಾಗೂ ರಕ್ತದೋತ್ತಡದಲ್ಲಿ ಏರುಪೇರಾಗುತ್ತಿದ್ದ ಕಾರಣದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದ ಅವರು, ಕೆಲ ದಿನಗಳ ಹಿಂದೆ ಅವರನ್ನು ಮನೆಗೆ ಕರೆದುಕೊಂಡು ಹೋಗಲಾಗಿತ್ತು.
ಡಾ.ಭೀಮಣ್ಣ ಖಂಡ್ರೆ ಅವರ ಮಗನಾದ ಈಶ್ವರ್ ಖಂಡ್ರೆ ಅವರು ಪ್ರಸ್ತುತ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಅವರ ಮೊಮ್ಮಗ ಸಾಗರ್ ಖಂಡ್ರೆ ಅವರು ಬೀದರ್ ಜಿಲ್ಲೆಯ ಸಂಸದರಾಗಿದ್ದಾರೆ.
ರಾಜಕೀಯ ಜೀವನ :
ಭೀಮಣ್ಣ ಖಂಡ್ರೆ ಅವರು 1953ರಲ್ಲಿ ಭಾಲ್ಕಿ ಪುರಸಭೆಯ ಪ್ರಥಮ ಚುನಾಯಿತ ಅಧ್ಯಕ್ಷರಾಗುವ ಮೂಲಕ ರಾಜಕೀಯ ಜೀವನಕ್ಕೆ ಪ್ರವೇಶಿಸಿದ್ದರು. 1962ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಅವರು, 4 ಬಾರಿ ಶಾಸಕರಾಗಿ, 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಎಂ.ವೀರಪ್ಪ ಮೊಯ್ಲಿ ಅವರ ಸಚಿವ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಸಹಕಾರಿ ಧುರೀಣರಾಗಿ ಮತ್ತು ರೈತರ ಕಲ್ಯಾಣದ ಬಗ್ಗೆ ಕಳಕಳಿ ಹೊಂದಿದ್ದ ಭೀಮಣ್ಣ ಖಂಡ್ರೆ ಅವರು ಹಳ್ಳಿಖೇಡ್ ನಲ್ಲಿರುವ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಹುಣಜಿಯಲ್ಲಿರುವ ಮಹಾತ್ಮಾ ಗಾಂಧೀ ಸಕ್ಕರೆ ಕಾರ್ಖಾನೆಯ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಕರ್ನಾಟಕ ಏಕೀಕರಣದ ರೂವಾರಿ :
ನಾರಂಜಾ ಮತ್ತು ಕಾರಂಜಾ ನೀರಾವರಿ ಯೋಜನೆಗಳ ಅನುಷ್ಠಾನದಲ್ಲೂ ಭೀಮಣ್ಣ ಖಂಡ್ರೆ ಅವರು, ಪ್ರಮುಖ ಪಾತ್ರ ವಹಿಸಿದ್ದರು. ಸ್ವಾತಂತ್ರ್ಯ ಸೇನಾನಿಯಾಗಿ, ಹೈದ್ರಾಬಾದ್ ವಿಮೋಚನೆಯ ಹೋರಾಟಗಾರರಾಗಿ ರಜಾಕಾರರ ದೌರ್ಜನ್ಯ ಪ್ರತಿಭಟಿಸಿದ್ದ ಅವರು, ಏಕೀಕರಣದ ಸಂದರ್ಭದಲ್ಲಿ ಬೀದರ್ ಜಿಲ್ಲೆಯನ್ನು ಕರ್ನಾಟಕದಲ್ಲಿಯೇ ಉಳಿಸಲು ಶ್ರಮಿಸಿದ್ದರು. ಅವರ ತಮ್ಮ ಈ ಕೊಡುಗೆಗಾಗಿ ಸುವರ್ಣ ಏಕೀಕರಣ ರಾಜ್ಯ ಪ್ರಶಸ್ತಿಗೂ ಅವರು ಭಾಜನರಾಗಿದ್ದರು.
ಶಿಕ್ಷಣತಜ್ಞ :
ಶಾಂತಿವರ್ಧಕ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ ಜಿಲ್ಲೆಯ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ದೊರಕಿಸಲು ಬೀದರ್ ನಲ್ಲಿ ಅಕ್ಕಮಹಾದೇವಿ ಕಾಲೇಜು, ಭಾಲ್ಕಿಯಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಿ ಸಾವಿರಾರು ಯುವಜನರ ಭವಿಷ್ಯ ರೂಪಿಸಿದ್ದರು. ತಮ್ಮ ಸ್ವಕ್ಷೇತ್ರ ಭಾಲ್ಕಿಯಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸುವ ಸಲುವಾಗಿ ಸಚಿವ ಸ್ಥಾನವನ್ನೇ ತ್ಯಾಗ ಮಾಡಿದ್ದರು.
ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸಮುದಾಯವನ್ನು ಒಗ್ಗೂಡಿಸುವಲ್ಲಿ ಶ್ರಮಿಸಿದ ಅವರು ಕೆಲವೇ ಸಾವಿರ ಇದ್ದ ಸಭಾದ ಸದಸ್ಯತ್ವವನ್ನು ಲಕ್ಷಕ್ಕೆ ತೆಗೆದುಕೊಂಡು ಹೋಗುವ ಮೂಲಕ ತಮ್ಮ ಸಂಘಟನಾ ಸಾಮರ್ಥ್ಯ ಪ್ರದರ್ಶಿಸಿದ್ದರು.







