ಕಾಂಗ್ರೆಸ್ ಪಕ್ಷ ಬಲಿಷ್ಠವಾಗಬೇಕಾದರೆ ಯುವಕರ ಶಕ್ತಿ, ಹಿರಿಯರ ಮಾರ್ಗದರ್ಶನ ಬೇಕು : ಮಾಜಿ ಸಚಿವ ರಾಜಶೇಖರ್ ಪಾಟೀಲ್

ಹುಮನಾಬಾದ್ : ಕಾಂಗ್ರೆಸ್ ಪಕ್ಷ ಬಲಿಷ್ಠವಾಗಬೇಕಾದರೆ ಯುವಕರ ಬಲಿಷ್ಠ ಶಕ್ತಿ ಜೊತೆಗೆ ಹಿರಿಯರ ಸಹಕಾರ, ಮಾರ್ಗದರ್ಶನ ಬೇಕು ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರು ಹೇಳಿದರು.
ಚಿಟಗುಪ್ಪಾ ಪಟ್ಟಣದಲ್ಲಿ ಹುಮನಾಬಾದ್ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಚಿಟಗುಪ್ಪಾ ವಲಯ ಮಟ್ಟದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ರಾಜಶೇಖರ್ ಪಾಟೀಲ್, ಕರ್ನಾಟಕ ಸರ್ಕಾರದಲ್ಲಿ ಏನೇ ಕೆಲಸ ಇರಲಿ ಮಾಡುವ ಶಕ್ತಿ ನನ್ನಲ್ಲಿದೆ. ಸೋತರು ಶಾಸಕ ಮಾಡುವ ಕೆಲಸವೆಲ್ಲ ನಾನು ಮಾಡುತ್ತೇನೆ. ಸೋಲು ಮುಗಿದು ಹೋದ ಕಥೆ. ಅದನ್ನ ಪದೇ ಪದೇ ಹೇಳೋದು ಬೇಡ. ಕಾಂಗ್ರೆಸ್ ಪಕ್ಷ ಒಂದು ಆಲದ ಮರ ಇದ್ದಂತೆ. ನಾವೆಲ್ಲ ಅದರ ನೆರಳಲ್ಲಿರುವವರು ಕಾರ್ಯಕರ್ತರಾಗಿದ್ದು, ನಿಮ್ಮ ಸಮಸ್ಯೆ ಏನಿದ್ದರು ನೇರವಾಗಿ ನನ್ನ ಗಮನಕ್ಕೆ ತರಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.
60 ವರ್ಷದಿಂದ ದೇಶದಲ್ಲಿ ಏನು ಆಗಿಲ್ಲ ಎಂದು ಮೋದಿ ಹೇಳುತ್ತಾರೆ. ಹುಮನಾಬಾದ್ ನಲ್ಲಿ ಇಲ್ಲಿನ ಶಾಸಕ 20 ವರ್ಷದಿಂದ ಏನು ಆಗಿಲ್ಲ ಎಂದು ಹೇಳುತ್ತಾರೆ. ನಾನು ಮನೆಗಳನ್ನ ತಂದು ಗುದ್ದಲಿ ಪೂಜೆ ಮಾಡಿದ್ದಕ್ಕೆ ಶಾಸಕ ಸಿದ್ದು ಪಾಟೀಲ್ ಅವರು ಗುದ್ದಲಿ ಪೂಜೆ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಇಲ್ಲಿನ ಜನ ರಾಜಕೀಯ ಜಾಣರಿದ್ದಾರೆ ಆದರೆ ಶಾಸಕನಿಗೆ ಇದೆಲ್ಲ ಗೊತ್ತಿಲ್ಲ ಆಕ್ರೋಶ ಹೊರಹಾಕಿದರು.
ಇಲ್ಲಿನ ನೂತನ ಶಾಸಕ ಯಾವುದೇ ಹೊಸ ಯೋಜನೆ ತಂದಿಲ್ಲ. ಅವರಿಗೆ ಈ ಹಿಂದೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದೆ. ಆದರೆ ಅವರು ಚರ್ಚೆಗೆ ಬರಲಿಲ್ಲ. ಅವರು ನೀಡಿದ ಒಂದು ಭರವಸೆ ಇಲ್ಲಿವರೆಗೆ ಈಡೇರೀಸಿಲ್ಲ. 4 ಕೋಟಿ ರೂ. ವೆಚ್ಚದಲ್ಲಿ ಪುರಭವನ ನಾನು ಮಾಡಿದ್ದೇನೆ. ಆದರೆ ಅದನ್ನೇ ಉದ್ಘಾಟನೆಗೊಳಿಸಲು ಶಾಸಕರಿಗೆ ಆಗುತ್ತಿಲ್ಲ ಎಂದು ಎಂದರು.
ದಲಿತರು ಬರೀ ಜೈ ಹೊಡಿಯೋಕೆ ಇದ್ದಾರೆ ಎಂದು ಶಾಸಕರು ಇತ್ತೀಚಿಗೆ ಹೇಳಿದ್ದಾರೆ. 2020ರಲ್ಲಿ ನೀನು ಎಲ್ಲಿದ್ದಿಯಪ್ಪಾ? ನೀನು ಜೈ ಹೊಡೆಲಿಲ್ವಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ ಅವರು, ಭ್ರಷ್ಟಾಚಾರದಲ್ಲಿ ಶಾಸಕ ಸಿದ್ದು ಪಾಟೀಲ್ ಅವರಿಗೆ ನೂರಕ್ಕೆ ನೂರು ಅಂಕ ಸಿಗುತ್ತದೆ. ಕ್ಷೇತ್ರದಲ್ಲಿ ಎಲ್ಲಾ ಕೆಲಸಗಳು ಶಾಸಕ ಹಾಗೂ ಅವರ ಕುಟುಂಬದವರೇ ಮಾಡುತ್ತಿದ್ದಾರೆ. ಎಲ್ಲವು ಕಳಪೆ ಮಟ್ಟದ ಕಾಮಗಾರಿಯಾಗುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಭೀಮರಾವ್ ಪಾಟೀಲ್, ಡಾ. ಚಂದ್ರಶೇಖರ್ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ, ಅಫ್ಸರ್ ಮಿಯಾ, ಕಾಂಗ್ರೆಸ್ ಹಿರಿಯ ಮುಖಂಡ ವೀರಣ್ಣ ಪಾಟೀಲ್, ಯುವ ಮುಖಂಡ ಅಭಿಷೇಕ್ ಪಾಟೀಲ್, ಯುವ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ಜಮಗಿ, ಗ್ರಾಮೀಣ ಅಧ್ಯಕ್ಷ ಓಂಕಾರ್ ತುಂಬಾ, ಯುವ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ರಾಹಿಲ್ ಖಿಲ್ಜಿ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.







