ಗಣೇಶ ವಿಸರ್ಜನೆ : ವಾಹನಗಳು ಪರ್ಯಾಯ ರಸ್ತೆಗಳ ಮೂಲಕ ಸಂಚರಿಸುವಂತೆ ಡಿಸಿ ಶಿಲ್ಪಾ ಶರ್ಮಾ ಆದೇಶ

ಬೀದರ್ : ನಗರದಲ್ಲಿ ಆ.31ರಂದು ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆಗಳು ಮಧ್ಯಾಹ್ನ 2 ಗಂಟೆಯಿಂದ ಪ್ರಾರಂಭವಾಗುತ್ತದೆ. ಗಣೇಶ ಮೂರ್ತಿಗಳ ವಿಸರ್ಜನೆ ಕಾಲಕ್ಕೆ ಸಂಚಾರ ಸುವ್ಯವಸ್ಥೆಯನ್ನು ಕಾಪಾಡಲು ವಾಹನಗಳು ಪರ್ಯಾಯ ರಸ್ತೆಗಳ ಮೂಲಕ ಸಂಚರಿಸುವಂತೆ ಕ್ರಮವಹಿಸಲು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಆದೇಶಿಸಿದ್ದಾರೆ.
ಜಿಲ್ಲೆಯಲ್ಲಿ ಆ.31 ರಂದು ಮಧ್ಯಾಹ್ನ 2 ಗಂಟೆಯಿಂದ ಸೆ.1 ರ ಬೆಳಿಗ್ಗೆ 4 ಗಂಟೆವರೆಗೆ ನಗರದ ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಸಂಚಾರಿ ಮಾರ್ಗಗಳನ್ನು ಬದಲಾಯಿಸಿ ಪರ್ಯಾಯ ರಸ್ತೆಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪರ್ಯಾಯ ರಸ್ತೆಗಳ ವಿವರ :
ಹೈದರಾಬಾದ್ ನಿಂದ ಬೀದರ್ ಬಸ್ ನಿಲ್ದಾಣಕ್ಕೆ ಬರುವ ಮತ್ತು ಹೋಗುವ ವಾಹನಗಳು, ಗುಂಪಾ ರಿಂಗ್ ರೋಡ್, ಚಿದ್ರಿ ರಿಂಗ್ ರೋಡ್, ಓಲ್ಡ್ ಆರ್ ಟಿ ಒ ಕಛೇರಿ ಮೂಲಕ ಬೀದರ್ ಬಸ್ ಸ್ಟ್ಯಾಂಡಿಗೆ ಬರುವುದು ಮತ್ತು ಹೋಗುವುದು ಮಾಡಬೇಕು. ನಗರದಲ್ಲಿ ಸಂಚಾರ ಮಾಡುವ ಸಿಟಿ ಬಸ್‍ಗಳು ಮತ್ತು ಸಾರ್ವಜನಿಕ ವಾಹನಗಳು, ಹೊಸ ಬಸ್ ನಿಲ್ದಾಣದಿಂದ ಖಂಡ್ರೆ ಪೆಟ್ರೋಲ್ ಪಂಪ್, ಕನ್ನಡಾಂಬೆ ವೃತ್ತದಿಂದ ಸಿಟಿ ಬಸ್ ಸ್ಟ್ಯಾಂಡಿಗೆ ಬರುವಂತೆ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಭಾಲ್ಕಿಯಿಂದ ಹೈದರಾಬಾದ್ ಗೆ ಹೋಗುವ ಬಸ್ ಅಥವಾ ವಾಹನಗಳು ಓಲ್ಡ್ ಆರ್‌ಟಿಒ ಕಚೇರಿ, ಚಿದ್ರಿ ರಿಂಗ್ ರೋಡ್, ಗುಂಪಾ ರಿಂಗ್ ರೋಡ್ ಮೂಲಕವಾಗಿ ಬಸ್ ಸ್ಟ್ಯಾಂಡಿಗೆ ಬರುವಂತೆ ಮತ್ತು ಹೋಗುವಂತೆ ಅವರು ಸೂಚಿಸಿದ್ದಾರೆ.
ಈ ಆದೇಶದಂತೆ ಜಿಲ್ಲಾ ಸಂಚಾರಿ ಪೊಲೀಸರು ವಾಹನಗಳನ್ನು ನಿಗದಿಪಡಿಸಿದ ಮಾರ್ಗದಲ್ಲಿ ಸಂಚರಿಸುವಂತೆ ಕ್ರಮವಹಿಸಬೇಕು ಎಂದು ಅವರು ಆದೇಶಿಸಿದ್ದಾರೆ.







