ಬಡತನದಿಂದಾಗಿ ಹೆಣ್ಣುಮಕ್ಕಳು ವೇಶ್ಯವಾಟಿಕೆಗೆ ಇಳಿದಿದ್ದಾರೆ: ಬಿಜೆಪಿ ಶಾಸಕ ಶರಣು ಸಲಗರ್ ವಿವಾದಾತ್ಮಕ ಹೇಳಿಕೆ

ಬೀದರ್: ಬಡತನದಿಂದ ಅದೆಷ್ಟೋ ನಮ್ಮ ಹೆಣ್ಣುಮಕ್ಕಳು ವೇಶ್ಯೆವಾಟಿಕೆಗೆ ಇಳಿದಿದ್ದಾರೆ. ಇದನ್ನು ನಾನು ಸಾಕ್ಷಿ ಸಮೇತವಾಗಿ ತೋರಿಸುತ್ತೇನೆ ಎಂದು ಬಸವಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗರ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶುಕ್ರವಾರ ಬಸವಕಲ್ಯಾಣದಲ್ಲಿ ನಡೆದ ರೈತರ ಬೆಳೆ ಹಾನಿ ಪರಿಹಾರಕ್ಕಾಗಿ ಒತ್ತಾಯಿಸಿ ರಾಜ್ಯ ಸರ್ಕಾರದ ವಿರುದ್ಧ ನಡೆಸಿದ ಅರೆಬೆತ್ತಲೆ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮಳೆ ಬಿದ್ದು ಹೊಲದಲ್ಲಿ ಸೊಂಟದ ವರೆಗೆ ನೀರು ಬಂದಿದ್ದವು. ಸೋಯಾ, ತೊಗರಿ ಎಲ್ಲ ಬೆಳೆ ಹಾಳಾದವು. ಆದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕೃಷಿ ಸಚಿವರು ಈ ಭೂಮಿ ಮೇಲೆ ಕಾಲಿಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೀದರ್, ಕಲ್ಬುರ್ಗಿ, ಯಾದಗಿರಿ ಜಿಲ್ಲೆಯಲ್ಲಿ ಪ್ರತಿ ವರ್ಷ ಮಳೆಯಲ್ಲಿ ರೈತರ ಬೆಳೆ ನಾಶವಾಗುತ್ತಿದೆ. ಇದಾವುದು ಕೂಡ ಮುಖ್ಯಮಂತ್ರಿಗಳಿಗೆ ಮಾಹಿತಿ ಇಲ್ಲ. ಚಿಂಚೋಳಿಯಲ್ಲಿ ಎಷ್ಟೋ ಜನ ಬಡ ರೈತರು ತುತ್ತು ಅನ್ನಕ್ಕಾಗಿ ಮಕ್ಕಳನ್ನು ಮಾರಾಟ ಮಾಡಿದ್ದು ನಿಮಗೆ ಗೊತ್ತಿಲ್ಲ ಎಂದು ಕಾಣುತ್ತದೆ. ಇನ್ನೊಂದು ಭಯಾನಕ ಸತ್ಯ ಎಂದರೆ ಬಡತನಕ್ಕಾಗಿ ಎಷ್ಟೋ ಜನ ಹೆಣ್ಣುಮಕ್ಕಳು ವೇಶ್ಯೆವಾಟಿಕೆಗೆ ಇಳಿದಿದ್ದು ನಾನು ಸಾಕ್ಷಿ ಸಮೇತವಾಗಿ ತೋರಿಸುತ್ತೇನೆ ಎಂದು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.
ಹಾಗೆಯೇ ಶರಣು ಸಲಗರ್ ಅವರು ಚಾಟಿ ಏಟು ಬಾರಿಸಿಕೊಳ್ಳುತ್ತಾ ಪ್ರತಿಭಟನೆ ನಡೆಸಿದರು.
ಶಾಸಕರ ನಡೆಯನ್ನು ವಿರೋಧಿಸಿ ಬೀದರ್ ನಗರದಲ್ಲಿ ಪ್ರತಿಭಟನೆಗೆ ಕುಳಿತ ರೈತರು, ಶರಣು ಸಲಗರ್ ಅವರು ನಾಟಕ ಮಾಡುತ್ತಿದ್ದಾರೆ. ಅವರು ರೈತರ ಪರವಾಗಿಲ್ಲ. ಒಂದು ವೇಳೆ ಅವರು ರೈತರ ಪರವಾಗಿದಿದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ರಾಷ್ಟ್ರೀಯ ವಿಪತ್ತಿನಿಂದ ಹಣ ಬಿಡುಗಡೆಗೊಳಿಸಬೇಕು ಎಂದು ತಿರುಗೇಟು ನೀಡಿದ್ದಾರೆ.







