ಹಿಟ್ಲರ್‌ನಿಂದ ಪಾಠ ಕಲಿತು ಗೋಲ್ವಾಲ್ಕರ್, ಹೆಡ್ಗೆವಾರ್ ಭಾರತದಲ್ಲಿ ಆರೆಸ್ಸೆಸ್‌ನ್ನು ಕಟ್ಟಿದ್ದಾರೆ : ಕೆ. ನೀಲಾ

ಬೀದರ್ : ವರ್ಣ ವ್ಯವಸ್ಥೆ, ಬ್ರಾಹ್ಮಣಶಾಹಿ ಮುಖಂಡರಾದ ಗೋಲ್ವಾಲ್ಕರ್ ಮತ್ತು ಹೆಡ್ಗೆವಾರ್ ಅವರು 1925ನೇ ವರ್ಷದ ದಸರಾ ದಿನ ಸ್ವತಃ ಜರ್ಮನ್ ದೇಶಕ್ಕೆ ಹೋಗಿ ಹಿಟ್ಲರ್ ಜೊತೆಗೆ ಮಾತನಾಡಿ, ಹಿಟ್ಲರ್ ನಿಂದ ಪಾಠ ಕಲಿತು ಭಾರತದಲ್ಲಿ ಆರೆಸ್ಸೆಸ್ ಕಟ್ಟಿದ್ದಾರೆ ಎಂದು ಹೋರಾಟಗಾರ್ತಿ, ಚಿಂತಕಿ ಕೆ. ನೀಲಾ ಹೇಳಿದರು.
ಬೀದರ್ ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಅಂಬೇಡ್ಕರ್ ಮಹಾ ಪರಿನಿಬ್ಬಾಣದ ಪ್ರಯುಕ್ತ 'ಬುದ್ದ ಭಾರತ ನಿರ್ಮಾಣ ಸಂಕಲ್ಪ ಸಮಾವೇಶ' ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ನೀಲಾ, ಜರ್ಮನಿಯಲ್ಲಿ ಹಿಟ್ಲರ್ ಸ್ವಸ್ತಿಕ್ ಬಾವುಟ ಇಟ್ಟುಕೊಂಡು ಆ ದೇಶದಲ್ಲಿ ಯಹೂದಿ ಮತ್ತು ಜುಹು ಜನಾಂಗದ ಮಧ್ಯ ಒಂದು ದೊಡ್ಡ ಸಮಸ್ಯೆ ಹಬ್ಬಿಸಿದನು. ನಾಲ್ಕೈದು ವರ್ಷದ ಅಂತರದಲ್ಲಿಯೇ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ 64 ಲಕ್ಷ ಜನರನ್ನು ಕೊಲೆ ಮಾಡಿದ್ದನು. ಅಂತಹ ಹಿಟ್ಲರ್ ನಿಂದ ಪಾಠ ಕೇಳಿಕೊಂಡು ಬಂದು ಭಾರತದೊಳಗೆ ಆರೆಸ್ಸೆಸ್ ಸಂಘ ಕಟ್ಟಿದ್ದಾರೆ ಎಂದು ಆರೋಪಿಸಿದರು.
ಆರೆಸ್ಸೆಸ್‌ನ ನೂರನೇ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಅವರು ಪಥ ಸಂಚಲನೆ ಮಾಡುತ್ತಾರೆ. ಆರೆಸ್ಸೆಸ್ ಅನ್ನು ರಾಷ್ಟ್ರ ಮಟ್ಟದ ದೊಡ್ಡ ಸಂಘಟನೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ನೂರು ವರ್ಷದಲ್ಲಿ ಅವರು ಏನು ಮಾಡಲಿಲ್ಲ. ಚಡ್ಡಿಯಿಂದ ಪ್ಯಾಂಟಿಗೆ ಬಂದಿರುವುದೇ ಅವರ ಘನಂದಾರಿ ಕೆಲಸವಾಗಿದೆ ಎಂದು ಹೇಳಿದರು.
ಲಿಂಗಾಯಿತರು ಹಿಂದುಗಳಲ್ಲ ಎನ್ನುವ ಸತ್ಯ ಹೇಳಿದ್ದಕ್ಕಾಗಿ ಎಂ.ಎಂ ಕಲಬುರ್ಗಿಯವರ ಹಣೆಗೆ ಗುಂಡಿಟ್ಟರು. ಅದು ನಮಗೆ ಮರೆಯಲು ಸಾಧ್ಯವಿಲ್ಲ. ನೀವು ಹಣೆಗೆ ಗುಂಡಿಕ್ಕಬಹುದು. ಆದರೆ ವಿಚಾರಗಳಿಗೆ ಗುಂಡಿಕ್ಕುವುದಕ್ಕೆ ಆಗುವುದಿಲ್ಲ. ಹೂವನ್ನು ಹೊಸಕಬಹುದು ಆದರೆ ಹೂವಿನ ಪರಿಮಳವನ್ನು ಹೊಸಕುವುದಕ್ಕೆ ಸಾಧ್ಯವಿಲ್ಲ ಎಂದರು.
ಅಂಬೇಡ್ಕರ್ ಅವರು ಈ ದೇಶಕ್ಕೆ ಘನವಾದ ಸಂವಿಧಾನ ನೀಡಿದ್ದಾರೆ. ಈ ದೇಶಕ್ಕೆ ಚೌರಂಗ ಎಂದರೆ ನಾಲ್ಕು ಬಣ್ಣದ ಬಾವುಟವಿದೆ ವಿನಃ ಅದು ತಿರಂಗವಿಲ್ಲ. ಕೇಸರಿ, ಬಿಳಿ, ಹಸಿರು ನಡುವೆ ನೀಲಿ ಚಕ್ರವಿದೆ. ಈ ಬಾವುಟವನ್ನು ಹಿಡಿದುಕೊಂಡು ಆರೆಸ್ಸೆಸ್ ನವರು ಮೆರವಣಿಗೆ ಮಾಡುವುದಿಲ್ಲ. ಇಂದು ದೇಶದಲ್ಲಿ ಹಿಂದೂ ಅಪಾಯದಲ್ಲಿಲ್ಲ ಬದಲಾಗಿ ಸಂವಿಧಾನ ಅಪಾಯದಲ್ಲಿದೆ. ಸಂವಿಧಾನ ರಕ್ಷಿಸುವ ಜವಾಬ್ದಾರಿ ನಮ್ಮದಾಗಿದೆ. ಆದರೆ ಅವರು ಲಾಠಿ ಹಿಡಿದುಕೊಂಡು ಮೆರವಣಿಗೆ ಮಾಡುತ್ತಿದ್ದಾರೆ. ಲಾಟಿ ಹಿಡಿದುಕೊಂಡು ಮೆರವಣಿಗೆ ಮಾಡುವುದೆಂದರೆ ಭಯೋತ್ಪಾದನೆಯನ್ನು ಹುಟ್ಟು ಹಾಕುವ ಮೊದಲ ಸಂಕೇತವಾಗಿದೆ ಎಂದು ಹೇಳಿದರು.
ಮನುವಾದವನ್ನು ಈ ದೇಶದಲ್ಲಿ ಪುನಃ ಜಾರಿ ಮಾಡುವ ವ್ಯಕ್ತಿ, ಶಕ್ತಿ ಯಾರೇ ಇರಲಿ ಅದನ್ನು ಪ್ರಶ್ನೆ ಮಾಡಿ ಧಿಕ್ಕರಿಸಬೇಕು ಎಂದು ಅಂಬೇಡ್ಕರ್ ಅವರು ಹೇಳಿದ್ದರು. ನಾವು ಆರೆಸ್ಸೆಸ್ ರಿಜಿಸ್ಟ್ರೇಷನ್, ಖರ್ಚು ವೆಚ್ಚ, ಅಕೌಂಟ್ ಬಗ್ಗೆ ಕೇಳಿದಾಗ ಮೋಹನ್ ಭಾಗವತ್ ಅವರು ಆರೆಸ್ಸೆಸ್ ಒಂದು ಜನತೆಯ ಗುಂಪು ಎಂದು ಹೇಳುತ್ತಾರೆ. ಇಂತಹ ಮೋಸದ ಕೆಲಸವನ್ನು ಆರೆಸ್ಸೆಸ್‌ನವರು ಬಿಡಬೇಕು. ಈ ದೇಶದಲ್ಲಿ ಮುಸ್ಲಿಮರನ್ನು ತಂದು ನಮ್ಮ ಜನತೆ ವಿರುದ್ಧ ಶತ್ರುಗಳಾಗಿ ಮಾಡುವ ಸಂಚು ರೂಪಿಸಿದ್ದಾರೆ. ಬಿಜೆಪಿ ಲೀಡರ್ ಮನೆಯಲ್ಲಿ ಅಳಿಯ ಅಥವಾ ಸೊಸೆ ಮುಸ್ಲಿಮರಾಗಿದ್ದಾರೆ. ಗೋ ರಕ್ಷಣೆ ಮಾಡಲು ಹೊರಟಿದ್ದಾರೆ. ಆದರೆ ಮಾಂಸ ರಫ್ತು ಮಾಡುವುದರಲ್ಲಿ ನಂಬರ್ ಒನ್ ಇದ್ದಾರೆ ಎಂದು ಆಕ್ರೋಶ ಹೊರಹಾಕಿದರು.
11 ವರ್ಷದ ಹಿಂದೆ 50 ಲಕ್ಷ ಕೋಟಿ ರೂ. ಮಾತ್ರ ಸಾಲ ಇತ್ತು. ಕೇವಲ 11 ವರ್ಷದ ಅಂತರದಲ್ಲಿ 255 ಲಕ್ಷ ಕೋಟಿ ರೂ. ಸಾಲವಾಗಿದೆ. ಮೋದಿ ಅವರು ಹವಾಯಿ ಚಪ್ಪಲ್ ಹಾಕುವವರು ಕೂಡ ಹವಾಯಿಯಲ್ಲಿ ಓಡಾಡುವ ಹಾಗೆ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಏರ್ ಇಂಡಿಯಾದ ಹವಾಯಿಯಲ್ಲಿ ಓಡಾಡುವವರಿಗೂ ಕೂಡ ಅಲ್ಲಿ ಬಸ್ ಸ್ಟ್ಯಾಂಡ್ ರೀತಿ ಮಾಡಿ ಕೂಡಿ ಹಾಕಿದ್ದರು ಎಂದು ಗುಡುಗಿದರು.
ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಭಂತೆ ವರಜ್ಯೋತಿ, ಪೌರಾಡಳಿತ ಸಚಿವ ರಹೀಮ್ ಖಾನ್, ಮಾಜಿ ಸಚಿವ ಬಂಡೆಪ್ಪ ಕಾಶಂಪುರ್, ಮಾಲಾ.ಬಿ.ನಾರಾಯಣರಾವ್, ಬಿಡಿಎ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಅಮೃತರಾವ್ ಚಿಮಕೊಡೆ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನ ಆಯೋಜನೆ ಸಮಿತಿಯ ಅಧ್ಯಕ್ಷ ರಮೇಶ್ ಡಾಕುಳಗಿ, ಕಾರ್ಯಾಧ್ಯಕ್ಷ ಮಹೇಶ್ ಗೋರನಾಳಕರ್, ಗೌರವಾಧ್ಯಕ್ಷ ಪ್ರಕಾಶ್ ಮಾಳಗೆ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ನಿಲಿಕಟ್ಟಿ, ಕಾರ್ಯದರ್ಶಿ ಅರುಣ ಪಟೇಲ್, ಸಾಯಿ ಶಿಂಧೆ, ಸಲಹಾ ಸಮಿತಿ ಸದಸ್ಯರಾದ ಅನಿಲಕುಮಾರ್ ಬೆಲ್ದಾರ್, ಬಾಬುರಾವ್ ಪಾಸ್ವಾನ್, ಶ್ರೀಪತರಾವ್ ದೀನೆ, ಡಾ.ಕಾಶಿನಾಥ್ ಚೆಲ್ವಾ, ರಮೇಶ್ ಸಾಗರ್, ಪ್ರದೀಪ್ ನಾಟೆಕರ್, ಸಂದೀಪ್ ಕಾಂಟೆ, ಸುನಿಲ್ ಸಂಗಮ್, ಪ್ರಕಾಶ್ ರಾವಣ, ಅಂಬಾದಾಸ್ ಗಾಯಕವಾಡ, ರಮೇಶ್ ಪಾಸ್ವಾನ್, ಆನಂದ ದೇವಪ್ಪಾ, ಉಲಾಸಿನಿ ಮುದಾಳೆ, ಲುಂಬಿಣಿ ಗೌತಮ್, ರಂಜಿತಾ ಜೈನೋರ್, ಪುನಿತಾ ಗಾಯಕವಾಡ, ವಿಜಯದಶಮಿ ಗೂನ್ನಳ್ಳಿಕರ್, ಪ್ರಶಾಂತ್ ದೊಡ್ಡಿ ಹಾಗೂ ಸುಮಂತ್ ಕಟ್ಟಿಮನಿ ಸೇರಿದಂತೆ ದಲಿತ ಸಂಘಟನೆ ಮುಖಂಡರು, ಹೋರಾಟಗಾರು, ಬೌದ್ಧ ಉಪಾಸಕರು, ಉಪಾಸಕಿಯರು ಉಪಸ್ಥಿತರಿದ್ದರು.







