ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಜೀವನ ರೂಪಿಸಿಕೊಳ್ಳಬೇಕು : ವಿನೋದ್ ರತ್ನಾಕರ್
ಬೀದರ್ : ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದು ಕಂಪ್ಯೂಟರ್ ಇಂಜಿನಿಯರ್ ವಿನೋದ್ ರತ್ನಾಕರ್ ಅವರು ತಿಳಿಸಿದರು.
ಇಂದು ಜಿಲ್ಲೆಯ ಕಬೀರಾಬಾದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಬೆಂಗಳೂರಿನ ಅವಿರತ ಟ್ರಸ್ಟ್ ವತಿಯಿಂದ ನೋಟ್ ಬುಕ್ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಖಾಸಗಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳೆ ಬುದ್ದಿವಂತರು ಇರುತ್ತಾರೆ ಎನ್ನುವುದು ಶುದ್ಧ ಸುಳ್ಳು. ಸರಕಾರಿ ಶಾಲೆಯ ಮಕ್ಕಳು ಕೂಡ ಬುದ್ದಿವಂತರಿರುತ್ತಾರೆ. ಸರಕಾರಿ ಶಾಲೆಯಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಉನ್ನತ ಮಟ್ಟದ ಸ್ಥಾನಕ್ಕೆ ಹೋಗಿರುವ ಉದಾಹರಣೆಗಳು ಇವೆ. ಹಾಗಾಗಿ ಸರ್ಕಾರಿ ಶಾಲೆಯ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಪಡೆದು ಉನ್ನತ ಮಟ್ಟಕ್ಕೆ ಹೋಗಬೇಕು ಎಂದು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.
ಇತ್ತೀಚಿಗೆ ಸರ್ಕಾರಿ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳೆ ಹೆಚ್ಚಾಗಿ ಓದುತ್ತಿರುವುದು ಕಂಡು ಬರುತ್ತಿದೆ. ಹಾಗಾಗಿ ನಿಮ್ಮ ಅಭ್ಯಾಸಕ್ಕೆ ಸ್ವಲ್ಪ ಸಹಾಯವಾಗಲಿ ಎಂದು ಅವಿರತ ಟ್ರಸ್ಟ್ ನವರು ನೀಡುವಂಥಹ ಸಹಾಯ ಪಡೆದು ಓದುವುದರಲ್ಲಿ ಯಶಸ್ಸು ಕಾಣಬೇಕು ಎಂದರು.
ಮುಖ್ಯಗುರು ಜಗದೇವಿ ಅವರು ಮಾತನಾಡಿ, ಬೆಳೆಯುವ ಪೈರು ಮೊಳಕೆಯಲ್ಲಿ. ಆ ಮೊಳಕೆ ಬೆಳೆದು ದೊಡ್ಡ ಮರವಾಗಬೇಕು. ಅದಕ್ಕೆ ಪೋಷಣೆಯ ಅವಶ್ಯಕತೆ ಇದೆ. ಹಾಗೆಯೇ ಮಕ್ಕಳ ಬದುಕು ಉತ್ತಮಗೊಳ್ಳಲು ಈ ಅವಿರತ ಟ್ರಸ್ಟ್ ನಂತವರ ಸಹಾಯ ಮೆಚ್ಚುವಂತದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಈಶ್ವರ್ ಮಿತ್ರ, ಸಹ ಶಿಕ್ಷಕ ವಿಠಲ್ ವರ್ಮಾ, ಚಂದಾ ಟ್ರಾನ್ಸಪೋರ್ಟ್ ನ ಮುಖ್ಯಸ್ಥ ದಿಲೀಪ್ ಚಂದಾ, ಅವಿರತ ಟ್ರಸ್ಟ್ ನ ಸದಸ್ಯ ಪ್ರವೀಣ್ ರತ್ನಾಕರ್, ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣ, ಉಪಾಧ್ಯಕ್ಷೆ ಮಮತಾ, ಪ್ರೇಮಸಾಗರ್, ಸಕ್ಪಾಲ್ ಹಾಗೂ ಆನಂದ ಮಾಸಿಮಾಡೆ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.