ದೇಶದಾದ್ಯಂತ ಕರಕುಶಲ ಉತ್ಪಾದನಾ ಕಂಪೆನಿಗಳು ಸ್ಥಾಪಿಸುವ ಯೋಜನೆ ಜಾರಿಯಲ್ಲಿದೆ : ಕಿರಣ್ ವಿ. ಎನ್

ಬೀದರ್ : ಕಳೆದ ಐದು ವರ್ಷಗಳಿಂದ ದೇಶದಾದ್ಯಂತ ಕನಿಷ್ಠ 100 ಕರಕುಶಲಕಾರರು ಕಾರ್ಯ ನಿರ್ವಹಿಸುವ ಪ್ರದೇಶಗಳಲ್ಲಿ ಕರಕುಶಲ ಉತ್ಪಾದನಾ ಕಂಪೆನಿಗಳನ್ನು ಸ್ಥಾಪಿಸುವ ಯೋಜನೆ ಜಾರಿಯಲ್ಲಿದೆ ಎಂದು ಧಾರವಾಡದ ಅಭಿವೃದ್ಧಿ ಆಯುಕ್ತರ (ಹಸ್ತಶಿಲ್ಪ) ಕಚೇರಿಯ ಸಹಾಯಕ ನಿರ್ದೇಶಕ ಕಿರಣ್ ವಿ. ಎನ್ ಹೇಳಿದರು.
ಬೀದರ್ ನ ಬ್ಲ್ಯಾಕ್‌ಗೋಲ್ಡ್ ಬಿದ್ರಿ ಕರಕುಶಲ ಉತ್ಪಾದಕರ ಕಂಪೆನಿ ನಿಯಮಿತದ ವತಿಯಿಂದ ಅಭಿವೃದ್ಧಿ ಆಯುಕ್ತ (ಹಸ್ತಶಿಲ್ಪ), ವಸ್ತು ಮಂತ್ರಾಲಯ, ಭಾರತ ಸರಕಾರದ NHDP ಯೋಜನೆ ಅಡಿಯಲ್ಲಿ ಬಿದ್ರಿ ಕಾಲೋನಿಯಲ್ಲಿ 50 ಬಿದ್ರಿ ಕುಶಲಕರ್ಮಿಗಳಿಗೆ ಸುಧಾರಿತ ಟೂಲ್‌ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ 2020ರಲ್ಲಿ ಬೀದರ್ ಜಿಲ್ಲೆಯಲ್ಲಿ ಬ್ಲ್ಯಾಕ್‌ಗೋಲ್ಡ್ ಬಿದ್ರಿ ಕರಕುಶಲ ಕಂಪೆನಿ ನೋಂದಾಯಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಿರಣ್ ವಿ. ಎನ್ ಹೇಳಿದರು.
ಈ ವೇಳೆ ಸುಬ್ರಮಣ್ಯಂ ಪ್ರಭು ಅವರು ಮಾತನಾಡಿ, ಬಿದ್ರಿ ಕಲೆ ಜಗತ್ತಿನಲ್ಲೇ ಅಪರೂಪದ, ಐತಿಹಾಸಿಕ ಹಾಗೂ ಖ್ಯಾತಿ ಪಡೆದ ಕಲೆಯಾಗಿದ್ದು, ಇದನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಎಲ್ಲಾ ಬಿದ್ರಿ ಕುಶಲಕರ್ಮಿಗಳು ಈ ಕಂಪೆನಿಯಲ್ಲಿ ಷೇರುದಾರರಾಗಿ ನೇರ ಲಾಭ ಪಡೆಯಬಹುದು ಎಂದು ತಿಳಿಸಿದರು.
ಸಹಯೋಗ ಸ್ವಯಂ ಸೇವಾ ಸಂಸ್ಥೆಯ ನಿರ್ದೇಶಕ ಹಾಗೂ ಬ್ಲ್ಯಾಕ್‌ಗೋಲ್ಡ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ. ಶಫಿಯುದ್ದೀನ್ ಮಾತನಾಡಿ, ಕಳೆದ 20 ವರ್ಷಗಳಿಂದ ಬಿದ್ರಿ ಕರಕುಶಲ ವಿಕಸನಕ್ಕಾಗಿ ಸರಕಾರ ಹಾಗೂ ಸಂಸ್ಥೆ ಮುಖಾಂತರ ಅನೇಕ ತರಬೇತಿಗಳು ಹಾಗೂ ಯೋಜನೆಗಳು ಜಾರಿಯಲ್ಲಿದ್ದು, 2020ರಿಂದ ಕಂಪೆನಿ ಮುಖಾಂತರ ಹೊಸ ಕಾರ್ಯಕ್ರಮಗಳು ಮುಂದುವರಿಯುತ್ತಿವೆ ಎಂದು ವಿವರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಅತಿಥಿಗಳಿಂದ 50 ಬಿದ್ರಿ ಕರಕುಶಲಕಾರರಿಗೆ ಟೂಲ್‌ಕಿಟ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬ್ಲ್ಯಾಕ್‌ಗೋಲ್ಡ್ ಬಿದ್ರಿ ಕರಕುಶಲ ಉತ್ಪಾದಕರ ಕಂಪೆನಿಯ ಅಧ್ಯಕ್ಷ ಶಫಿ ರಹಮಾನ್, ನಿರ್ದೇಶಕ ಎಂ.ಡಿ. ಸಯೀದ್ ಅಹ್ಮದ್, ಎಂ.ಡಿ. ಮೊಯಿನ್, ಅಬ್ದುಲ್ ಬಾರೀ, ರಾಜಕುಮಾರ್, ಅಬ್ದುಲ್ ಸಮದ್, ಎಂ.ಡಿ ಆರಿಫ್, ಮಹ್ಮದ್ ಅಲಿ, ಅಂಜುಮ ಅಹ್ಮದ್ ಹಾಗೂ ಸಂದೀಪ್ ಉಪಸ್ಥಿತರಿದ್ದರು.







