ಬೀದರ್ | ಮನುಷ್ಯನ ಜೀವನದಲ್ಲಿ ದೊಡ್ಡ ಆಸ್ತಿ ಎಂದರೆ ಆರೋಗ್ಯ : ಪ್ರೊ.ಬಿ.ಎಸ್.ಬಿರಾದಾರ್

ಬೀದರ್ : ಮನುಷ್ಯನ ಜೀವನದಲ್ಲಿ ದೊಡ್ಡ ಆಸ್ತಿ ಎಂದರೆ ಆರೋಗ್ಯವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಬೇಕಾಗಿದೆ ಎಂದು ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ್ ಅವರು ಹೇಳಿದರು.
ಇಂದು ಬೀದರ್ ವಿಶ್ವವಿದ್ಯಾಲಯದಲ್ಲಿ ಆಕ್ಸಿಲೈಫ್ ಆಸ್ಪತ್ರೆ ಹಾಗೂ ಬೀದರ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರೋಗ್ಯದ ಬಗ್ಗೆ ನಿರ್ಲಕ್ಷ ಸಲ್ಲದು. ಚಿಕ್ಕ ಚಿಕ್ಕ ಕಾಯಿಲೆಗಳನ್ನು ನಿರ್ಲಕ್ಷಿಸಿದರೆ ಗಂಡಾಂತರ ಖಂಡಿತ. ಹಾಗಾಗಿ ಆರೋಗ್ಯದ ಕಡೆಗೆ ಹೆಚ್ಚಿನ ನಿಗಾವಹಿಸಬೇಕು. ಉತ್ತಮ ಆರೋಗ್ಯವು ದೇಶದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದರು.
ಆಕ್ಸಿಲೈಫ್ ಆಸ್ಪತ್ರೆಯ ವೈದ್ಯ ಡಾ.ಸಪೂರಾ ಅವರು ಮಾತನಾಡಿ, ವ್ಯಕ್ತಿಗಳು ಸಮತೋಲಿತ ಆಹಾರ ಸೇವಿಸಬೇಕು. ಹೆಚ್ಚಿಗೆ ನೀರನ್ನು ಸೇವಿಸಬೇಕು. ನಿರಂತರ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಅನೇಕ ವೈರಸ್‌ಗಳಿಂದಾಗಿ ಸಾಕಷ್ಟು ರೋಗಗಳು ಬರುತ್ತಿವೆ. ಅದಕ್ಕಾಗಿ ಸಾರ್ವಜನಿಕರು ಹೆಚ್ಚಿನ ಜಾಗೃತಿ ಹಾಗೂ ಎಚ್ಚರವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಆಸ್ಪತ್ರೆಯ ಮಾರ್ಕೆಟಿಂಗ್ ಮ್ಯಾನೇಜರ್ ನಾಗರಾಜ್ ಸ್ವಾಮಿ ಮಾತನಾಡಿ, ನಮ್ಮ ದಿನಚರಿಯು ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ಉತ್ತಮ ಆಹಾರ ಸೇವನೆ ಮುಖ್ಯವಾಗಿದೆ ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಆಡಳಿತ ಕುಲಸಚಿವೆ ಸುರೇಖಾ ಅವರು ಮಾತನಾಡಿದರು.
ಈ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಎರಡು ನೂರಕ್ಕಿಂತ ಅಧಿಕ ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳು ತಪಾಸಣೆಗೊಳಗಾಗಿ ವೈದ್ಯರಿಂದ ಆರೋಗ್ಯದ ಕುರಿತಾದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಬೀದರ್ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಪರಮೇಶ್ವರ್ ನಾಯ್ಕ ಟಿ., ಆಕ್ಸಿಲೈಫ್ ಆಸ್ಪತ್ರೆಯ ಸಿಬ್ಬಂದಿಗಳಾದ ಡಾ.ರಾಮಚಂದ್ರ ಗಣಾಪೂರ್, ಡಾ.ಗುಂಡಪ್ಪ ಸಿಂಗೆ, ಸುಜಾತಾ, ರೋಹಿತ್, ವಿಶ್ವ ಹಾಗೂ ಬಸವರಾಜ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







