ಮನುಷ್ಯನಿಗೆ ಮಾರಕವಾದ ಪ್ಲಾಸ್ಟಿಕ್ ನಿಷೇಧಕ್ಕೆ ಸಹಕರಿಸಿ : ಸುಹಾಸಿನಿ
ಪ್ರಭೋದಿನಿ ಶಾಲೆಯಿಂದ 500 ಸಸಿಗಳ ಉಚಿತವಾಗಿ ವಿತರಣೆ

ಬೀದರ್: ಮನುಷ್ಯ, ಪ್ರಾಣಿ ಹಾಗೂ ಪಕ್ಷಿಗಳಿಗೆ ಮಾರಕವಾಗಿರುವ ಪ್ಲಾಸ್ಟಿಕ್ ನಿಷೇಧಿಸುವುದು ಅತಿ ಮುಖ್ಯವಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಿದರೆ ಮಾತ್ರ ಸಾಧ್ಯವಿದೆ ಎಂದು ಪ್ರಾಂಶುಪಾಲೆ ಸುಹಾಸಿನಿ ಅವರು ಹೇಳಿದರು.
ಇಂದು ನಗರದ ಪ್ರಭೋದಿನಿ ಇಂಗ್ಲಿಷ್ ಮಾಧ್ಯಮ ಶಾಲೆಯಿಂದ ವಿಶ್ವ ಪರಿಸರ ದಿನಾಚರಣೆ ನಿಮಿತ್ತವಾಗಿ ಮಕ್ಕಳಿಗೆ ಹಾಗೂ ಸುತ್ತಲಿನ ಜನರಿಗೆ ಸುಮಾರು 500 ಸಸಿಗಳನ್ನು ಉಚಿತವಾಗಿ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಸುತ್ತಲಿನ ಪರಿಸರ ಚೆನ್ನಾಗಿರಬೇಕಾದರೆ ಗಿಡ, ಮರಗಳು ಬೆಳೆಸುವುದು ಬಹಳ ಮುಖ್ಯವಾಗಿದೆ. ಹೀಗಾಗಿ ಎಲ್ಲರು ಸಸಿಗಳು ನೆಡಬೇಕು. ಹಾಗೆಯೇ ಪ್ಲಾಸ್ಟಿಕ್ ನಿಷೇಧಕ್ಕೆ ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಹಿರಿಯ ವಕೀಲ ಎಂ.ಆರ್ ಗೋಡಬೋಲೆ ಮಾತನಾಡಿ, ಕೋವಿಡ್ ನಲ್ಲಿ ಆಮ್ಲಜನಕದ ಮಹತ್ವ ಏನಿದೆ ಎಂಬುದು ಎಲ್ಲರಿಗೆ ತಿಳಿದಿದೆ. ಗಿಡ, ಮರಗಳು ಆಮ್ಲಜನಕ ನೀಡುತ್ತವೆ. ಈ ಶಾಲೆಯಿಂದ ಸುಮಾರು 500 ಸಸಿಗಳನ್ನು ವಿತರಿಸಿದರೆ ಇವುಗಳು ದೊಡ್ಡದಾಗಿ ಅನೇಕ ಜನರಿಗೆ ಉಪಯೋಗವಾದಂತಾಗುತ್ತದೆ. ಇದು ಒಳ್ಳೆ ಕೆಲಸವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಹೈಕೋರ್ಟ್ ವಕೀಲ ಜಯರಾಜ್ ಬುಕ್ಕಾ ಅವರು ಮಾತನಾಡಿ, ಎಲ್ಲಿ ಗಿಡ ಮರಗಳು ಇರತ್ತವೆಯೋ ಅದರ ಸುತ್ತಲು ಶುದ್ದ ಗಾಳಿ, ಸ್ವಚ್ಛ ವಾತಾವರಣ ಇರುತ್ತದೆ. ಇದರಿಂದಾಗಿ ಮನುಷ್ಯನು ಆರೋಗ್ಯವಂತರಾಗಲು ಸಾಧ್ಯವಿದೆ ಎಂದರು.
ಈ ಸಮಾರಂಭದಲ್ಲಿ ಶಾಲೆಯ ಕಾರ್ಯದರ್ಶಿ ಸುನೀಲಕುಮಾರ್ ಆಣದೂರೆ, ಜಿಲ್ಲಾ ಸೇಷನ್ ಕೋರ್ಟ್ ನ ಕಾನೂನು ಸಲಹೆಗಾರ ಶಿವರಾಜ್ ಪಾಟೀಲ್, ನಿವೃತ್ತ ಅಧಿಕಾರಿ ಸವಿತಾ ಹಾಗೂ ಶಾಲೆಯ ಸಿಬ್ಬಂದಿ, ಪಾಲಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.







