ಔರಾದ್ (ಬಿ) ಪಟ್ಟಣದಲ್ಲಿ ನಡೆದ ಆರೆಸ್ಸೆಸ್ ಪಥ ಸಂಚಲನದಲ್ಲಿ ವಸತಿ ನಿಲಯದ ಸಿಬ್ಬಂದಿ ಭಾಗಿ : ಅಮಾನತಿಗಾಗಿ ಮನವಿ

ಬೀದರ್ : ಔರಾದ್ (ಬಿ) ಪಟ್ಟಣದಲ್ಲಿ ನಡೆದ ಆರೆಸ್ಸೆಸ್ ಪಥ ಸಂಚಲನದಲ್ಲಿ ವಸತಿ ನಿಲಯದ ಸಿಬ್ಬಂದಿ ಭಾಗಿಯಾಗಿದ್ದು, ಅವರನ್ನು ಅಮಾನತುಗೊಳಿಸಲು ದಲಿತ ಸೇನೆಯು ಮನವಿ ಮಾಡಿದೆ.
ಇಂದು ಹಿಂದುಳಿದ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಔರಾದ್ (ಬಿ) ತಾಲ್ಲೂಕಿನ ಸಂತಪುರನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ ಪೂರ್ವ ಬಾಲಕರ ವಸತಿ ನಿಲಯದ ಸಿಬ್ಬಂದಿ ವಿಜಯ್ ಅವರು ಅ.7 ರಂದು ಔರಾದ್ ಪಟ್ಟಣದಲ್ಲಿ ನಡೆದ ಆರೆಸ್ಸೆಸ್ ಪಥಸಂಚಲನದಲ್ಲಿ ಭಾಗವಹಿಸಿದ್ದಾರೆ ಎಂದು ದೂರಲಾಗಿದೆ.
ವಿಜಯ್ ಅವರು ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗವಹಿಸಿದ್ದ ಕುರಿತ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಂಬಂಧಿಸಿದ ದೃಶ್ಯಗಳು ಮನವಿ ಪತ್ರದೊಂದಿಗೆ ಲಗತ್ತಿಸಲಾಗಿದೆ. ಸರ್ಕಾರಿ ನೌಕರರು ತಮ್ಮ ಸೇವಾ ನಿಯಮಗಳ ಪ್ರಕಾರ ಯಾವುದೇ ರಾಜಕೀಯ ಅಥವಾ ಧಾರ್ಮಿಕ ಸಂಘಟನೆಯ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ. ಈ ನಿಯಮಗಳನ್ನು ಉಲ್ಲಂಘಿಸಿ ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗವಹಿಸಿರುವುದು ರಾಜ್ಯ ಸರ್ಕಾರದ ಸೇವಾ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಉಲ್ಲೇಖಿತ ಸರ್ಕಾರಿ ನೌಕರಸ್ಥನ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ತಕ್ಷಣವೇ ಅಮಾನತು ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಈ ಮನವಿ ಪತ್ರದ ಮೇಲೆ ದಲಿತ ಸೇನೆಯ ಅಧ್ಯಕ್ಷ ಸುನಿಲ್ ಮಿತ್ರಾ, ವಿದ್ಯಾರ್ಥಿ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ರತ್ನದೀಪ್ ಕಸ್ತೂರೆ ಹಾಗೂ ದಲಿತ್ ವಿದ್ಯಾರ್ಥಿ ಪರಿಷತ್ ನ ಅಧ್ಯಕ್ಷ ಆನಂದ್ ಕಾಂಬಳೆ ಅವರ ಸಹಿ ಹಾಕಲಾಗಿದೆ.







