ಹುಲಸೂರು | ಇಕ್ಬಾಲ್ ಪಟೇಲ್ ಶಾಲೆಯಲ್ಲಿ ವಿಶಿಷ್ಟವಾಗಿ ಮಕ್ಕಳ ದಿನಾಚರಣೆ
ವ್ಯಾಪಾರ ಮಳಿಗೆಗಳನ್ನು ಸ್ಥಾಪಿಸಿ ಗಮನ ಸೆಳೆದ ವಿದ್ಯಾರ್ಥಿಗಳು

ಹುಲಸೂರು: ಪಟ್ಟಣದ ಇಕ್ಬಾಲ್ ಪಟೇಲ್ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಅಂಗವಾಗಿ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ವಿವಿಧ ವ್ಯಾಪಾರ ಮಳಿಗೆಗಳನ್ನು ಸ್ಥಾಪಿಸಿ, ಬಗೆಬಗೆಯ ತಿಂಡಿ-ತಿನಿಸುಗಳನ್ನು ಮಾರಾಟ ಮಾಡುವ ಮೂಲಕ ಗಮನ ಸೆಳೆದರು.
ವಿದ್ಯಾರ್ಥಿಗಳು ಸ್ವತಃ ವ್ಯಾಪಾರಿಗಳಾಗಿ ಮಳಿಗೆಗಳನ್ನು ನಿರ್ವಹಿಸಿ, ಖರೀದಿ ಮತ್ತು ಮಾರಾಟದ ಅನುಭವ ಪಡೆದುಕೊಂಡರು. ಈ ಮೂಲಕ ಮಕ್ಕಳಲ್ಲಿ ವ್ಯಾಪಾರ ಜ್ಞಾನ, ವ್ಯವಹಾರಿಕ ಕೌಶಲ್ಯ ಹಾಗೂ ಸ್ವಾವಲಂಬನೆಯ ಮನೋಭಾವ ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಾಲೆಯ ಪ್ರಾಂಶುಪಾಲೆ ಸಭಿಯಾ ಫಯಾಜ್ ಪಟೇಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು. ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ವ್ಯಾಪಾರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಉತ್ಸಾಹಕ್ಕೆ ಪ್ರೋತ್ಸಾಹ ನೀಡಿದರು. ಪಠ್ಯದ ಜೊತೆಗೆ ಮಕ್ಕಳಿಗೆ ಪ್ರಾಯೋಗಿಕ ಜ್ಞಾನ ನೀಡುವ ಉದ್ದೇಶದಿಂದ ಆಯೋಜಿಸಿದ್ದ ಈ ವ್ಯಾಪಾರ ಮೇಳ ಎಲ್ಲರ ಗಮನ ಸೆಳೆಯಿತು.






