ಹುಲಸೂರು | ವ್ಯಸನಮುಕ್ತ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು: ಡಾ.ಶಂಕರಗೌಡ

ಹುಲಸೂರು: ದುಶ್ಚಟಗಳಿಂದಾಗಿ ಅನೇಕ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ವ್ಯಸನಮುಕ್ತ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು. ಆಗ ಮಾತ್ರ ಸ್ವಸ್ಥ ಹಾಗೂ ಸದೃಢ ಭಾರತ ನಿರ್ಮಿಸಲು ಸಾಧ್ಯ ಎಂದು ನವಕಲ್ಯಾಣ ಕರ್ನಾಟಕ ಮಹಾಸಭಾದ ಕಾರ್ಯದರ್ಶಿ ಡಾ.ಶಂಕರಗೌಡ ಹೇಳಿದರು.
ಹಾಲಹಳ್ಳಿ ಗ್ರಾಮದಲ್ಲಿ ಡಾ. ಶಿವಾನಂದ ಮಹಾಸ್ವಾಮಿಗಳ 75ನೇ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ‘ವ್ಯಸನಮುಕ್ತ ಭಾರತ–ಶರಣ ಸಂದೇಶ ಯಾತ್ರೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದುಶ್ಚಟಗಳಿಗೆ ದಾಸರಾಗುವವರು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೆ ತುತ್ತಾಗುವುದಲ್ಲದೆ, ಇಡೀ ಕುಟುಂಬವನ್ನೇ ಸಂಕಷ್ಟಕ್ಕೆ ದೂಡುತ್ತಾರೆ. ಹೀಗಾಗಿ ಪ್ರತಿಯೊಬ್ಬರೂ ದುಶ್ಚಟಗಳಿಂದ ದೂರವಿದ್ದು, ಆರೋಗ್ಯಕರ ಜೀವನ ನಡೆಸುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು. ಶಿವಾನಂದ ಮಹಾಸ್ವಾಮಿಗಳ ಅಮೃತ ಮಹೋತ್ಸವದ ಅಂಗವಾಗಿ ಭಕ್ತರು ಹಮ್ಮಿಕೊಂಡಿರುವ ಈ ಯಾತ್ರೆ ಸಮಾಜಮುಖಿ ಕಾರ್ಯವಾಗಿದೆ. ಶರಣರ ಕಾಯಕ, ಆರೋಗ್ಯ ಹಾಗೂ ಸದಾಚಾರದ ಸಂದೇಶಗಳನ್ನು ಹೊತ್ತು ತಾಲ್ಲೂಕಿನ ಪ್ರತಿ ಗ್ರಾಮದಲ್ಲೂ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ಯಾತ್ರೆ ಹೊಂದಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಮುದಗಲ್‌ನ ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ದುಶ್ಚಟಗಳಿಂದ ತಮಗೆ ಹಾಗೂ ತಮ್ಮನ್ನು ನಂಬಿದ ಕುಟುಂಬಕ್ಕೆ ಆಗುವ ಹಾನಿಯನ್ನು ಅರಿಯಬೇಕು. ಶರಣರು ದುರಾಚಾರ ಮತ್ತು ದುರ್ವ್ಯಸನಗಳಿಂದ ದೂರವಿರುವುದಕ್ಕೆ ಮಹತ್ವ ನೀಡಿದ್ದರು. ಹೀಗಾಗಿ ಈ ಯಾತ್ರೆಯ ಸಂದೇಶ ಪ್ರತಿಯೊಂದು ಮನೆ ಹಾಗೂ ಮನವನ್ನು ತಲುಪುವ ಅಗತ್ಯವಿದೆ ಎಂದರು.
ಹುಲಸೂರಿನ ಶಿವಾನಂದ ಸ್ವಾಮೀಜಿ ಮಾತನಾಡಿ, ತಾಲ್ಲೂಕು ರೈತ ಸಂಘದ ನೇತೃತ್ವದಲ್ಲಿ ಆಯೋಜಿಸಿರುವ ಶರಣ ಸಂದೇಶ ಯಾತ್ರೆಯ ಆಶಯವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ವ್ಯಸನಿಗಳು ವ್ಯಸನಮುಕ್ತರಾದಾಗ ಮಾತ್ರ ಯಾತ್ರೆಯ ಉದ್ದೇಶ ಹಾಗೂ ನಮ್ಮ ಸಂಕಲ್ಪ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಾಯಿಗಾಂವ್‌ನ ಪೂಜ್ಯ ಶಿವಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ತಾಲ್ಲೂಕು ರೈತ ಸಂಘದ ಕಾರ್ಯದರ್ಶಿ ರಾಜಕುಮಾರ್ ನಿಡೋದೆ, ಯಾತ್ರೆಯ ಸಂಚಾಲಕ ಆಕಾಶ್ ಖಂಡಾಳೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಲತಾ ಹಾರ್ಕುಡೆ, ಸುಧೀರ್ ಕಡಾದಿ, ಬಸವರಾಜ ರಗಟೆ, ಬಸವರಾಜ ಚೌರೆ, ಸುನೀಲ ಭುಜಂಗೆ, ಶಿವಕುಮಾರ ಕನ್ನಡೇ, ಜಗನ್ನಾಥ ಬಡದಾಳೆ, ಹೈದರ ಬೇಪಾರಿ, ಸದಾನಂದ ಬಿರಾದಾರ, ಶಂಕ್ರಪ್ಪ ಪಾಟೀಲ, ಶಿವಕುಮಾರ ಪಾಟೀಲ, ಬಸಪ್ಪ ಬಿರಾದಾರ, ಜಯಶ್ರೀ ಪಾಟೀಲ ಹಾಗೂ ಪ್ರಭಾವತಿ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಜಕುಮಾರ್ ತೊಂಡಾರೆ ಸ್ವಾಗತಿಸಿದರು. ಡಿ.ಸಿ. ಪಾಟೀಲ್ ನಿರೂಪಿಸಿದರು.






