ಹುಲಸೂರು | ಜೋತು ಬಿದ್ದ ವಿದ್ಯುತ್ ತಂತಿಯಿಂದ ಬೆಂಕಿ: ಎರಡು ಎಕರೆ ಕಬ್ಬಿನ ಬೆಳೆ ಭಸ್ಮ

ಹುಲಸೂರು: ಜೋತು ಬಿದ್ದ ವಿದ್ಯುತ್ ತಂತಿಗಳಿಂದ ಬೆಂಕಿಯ ಕಿಡಿ ಬಿದ್ದು ಎರಡು ಎಕರೆ ಕಬ್ಬಿನ ಬೆಳೆ ಸುಟ್ಟುಹೋಗಿರುವ ಘಟನೆ ತಾಲ್ಲೂಕಿನ ಮೀರಖಲ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ನಾಗೇಂದ್ರರಾವ್ ಶಿಂಧೆ ಅವರಿಗೆ ಸೇರಿದ ಸರ್ವೆ ಸಂಖ್ಯೆ 3ರ ಜಮೀನಿನಲ್ಲಿ ಈ ಅವಘಡ ಸಂಭವಿಸಿದೆ. ಜೋತು ಬಿದ್ದ ವಿದ್ಯುತ್ ತಂತಿಗಳಿಂದ ಹೊರಬಿದ್ದ ಬೆಂಕಿಯ ಕಿಡಿ ಕಬ್ಬಿನ ಬೆಳೆಗೆ ತಗುಲಿ, ಬೆಂಕಿ ವ್ಯಾಪಿಸಿ ಬೆಳೆ ಸಂಪೂರ್ಣ ಸುಟ್ಟುಹೋಗಿದೆ. ಮಾಹಿತಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರಾದರೂ, ಅವರು ಬರುವಷ್ಟರಲ್ಲಿ ಕಬ್ಬಿನ ಬೆಳೆ ಬಹುತೇಕ ಸುಟ್ಟುಹೋಗಿತ್ತು. ಒಟ್ಟು ಎರಡು ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಜಮೀನಿನ ಮೇಲೆ ಹಾದುಹೋಗಿರುವ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು, ಈ ಹಿಂದೆ ಹಲವು ಬಾರಿ ಕಿಡಿ ಕಾಣಿಸಿಕೊಂಡಿತ್ತು. ಈ ಬಗ್ಗೆ ಆತಂಕ ವ್ಯಕ್ತಪಡಿಸಿ ದುರಸ್ತಿಗೆ ಮನವಿ ಮಾಡಿದ್ದರೂ ಸಮರ್ಪಕವಾಗಿ ಕ್ರಮ ಕೈಗೊಂಡಿಲ್ಲ. ಇದೀಗ ಕಷ್ಟಪಟ್ಟು ಬೆಳೆದ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ನಾಗೇಂದ್ರರಾವ್ ಶಿಂಧೆ ಮನವಿ ಮಾಡಿದ್ದಾರೆ.
ವಿದ್ಯುತ್ ತಂತಿಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಜೆಸ್ಕಾಂ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಕಾಶಿನಾಥ್ ಹಾಗೂ ಹುಲಸೂರು ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಜ್ಞಾನಬಾ ನಿಟ್ಟುರೆ ಉಪಸ್ಥಿತರಿದ್ದರು.






