ಹುಲಸೂರು| ಶಾರ್ಟ್ ಸರ್ಕ್ಯೂಟ್ನಿಂದ 4 ಎಕ್ರೆ ಕಬ್ಬಿಗೆ ಬೆಂಕಿ: ಅಪಾರ ನಷ್ಟ

ಹುಲಸೂರು: ವಿದ್ಯುತ್ ಪರಿವರ್ತಕದಿಂದ ಬೆಂಕಿಯ ಕಿಡಿ ಬಿದ್ದು ಇಬ್ಬರು ರೈತರಿಗೆ ಸೇರಿದ ನಾಲ್ಕು ಎಕರೆ ಕಬ್ಬಿನ ಬೆಳೆ ಸುಟ್ಟುಹೋಗಿರುವ ಘಟನೆ ಹುಲಸೂರ್ ಪಟ್ಟಣದ ಹೊರವಲಯದಲ್ಲಿರುವ ಹೊಲವೊಂದರಲ್ಲಿ ಬುಧವಾರ ನಡೆದಿದೆ.
ಪಟ್ಟಣದ ರೈತರಾದ ಧನರಾಜ್ ಚೌರೆ ಹಾಗೂ ಸಚಿನ್ ಚೌರೆ ಅವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ.
ಸಚಿನ್ ಚೌರೆ ಹಾಗೂ ಧನರಾಜ್ ಚೌರೆ ಅವರು ತಲಾ ಎರಡು ಎಕರೆ ಭೂಮಿಯಲ್ಲಿ ಕಬ್ಬು ಬೆಳೆದಿದ್ದರು. ಆದರೆ, ಆ ಕಬ್ಬು ಬೆಂಕಿಗಾಹುತಿಯಾಗಿ ರೈತರಿಗೆ ಅಪಾರ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ.
ವಿದ್ಯುತ್ ಪರಿವರ್ತಕದಲ್ಲಿನ ದೋಷದ ಕುರಿತು ಈಗಾಗಲೇ ಜೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ದುರಸ್ತಿ ಕಾರ್ಯ ಕೈಗೊಂಡಿರಲಿಲ್ಲ.
ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತಮ್ಮ ನಾಲ್ಕು ಎಕರೆ ಕಬ್ಬಿನ ಬೆಳೆ ನಷ್ಟವಾಗಿದೆ ಎಂದು ರೈತ ಧನರಾಜ್ ಚೌರೆ ಆರೋಪಿಸಿದ್ದಾರೆ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಹುಲಸೂರ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.




