ಹುಲಸೂರ್ | ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹಿಸಿ ಎರಡನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ

ಹುಲಸೂರ್: ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕಲ್ಯಾಣ ಕರ್ನಾಟಕ ಮಹಾಸಭಾ ಸೇರಿದಂತೆ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಪಟ್ಟಣದ ಅಲ್ಲಮಪ್ರಭು ಶೂನ್ಯಪೀಠದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ಬಳಿಕ ತಹಶೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದರು.
ನವಕಲ್ಯಾಣ ಕರ್ನಾಟಕ ಮಹಾಸಭಾ ಕಾರ್ಯದರ್ಶಿ ಡಾ. ಶಂಕರಗೌಡ ಮಾತನಾಡಿ, ಬೀದರ್ ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಆದರೆ ಉಳಿದ ತಾಲ್ಲೂಕುಗಳಲ್ಲಿಯೂ ಬರ ಪರಿಸ್ಥಿತಿ ಗಂಭೀರವಾಗಿದ್ದರೂ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಹುಲಸೂರ್ ತಾಲ್ಲೂಕು ಬರಗಾಲ ಘೋಷಣೆಗೆ ಅಗತ್ಯ ಮಾನದಂಡಗಳನ್ನು ಪೂರೈಸಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಕೂಡಲೇ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಹೋರಾಟವನ್ನು ಹಂತ ಹಂತವಾಗಿ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ರೈತ ಮುಖಂಡ ರಾಜಕುಮಾರ್ ನಿಡೋದೆ ಮಾತನಾಡಿ, ಹುಲಸೂರ್ ತಾಲ್ಲೂಕಿನ ರೈತರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ತಾಲ್ಲೂಕು ಬರಗಾಲ ಘೋಷಣೆಗೆ ಅರ್ಹವಾಗಿದ್ದರೂ ಇದುವರೆಗೆ ಘೋಷಿಸದಿರುವುದು ಖಂಡನೀಯ ಎಂದು ಹೇಳಿದರು.
ಮಲ್ಲಪ್ಪ ಧಬಾಲೆ ಮಾತನಾಡಿ, ಬರಗಾಲ ಘೋಷಣೆಗೆ ಸಂಬಂಧಿಸಿದ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ತಾಲ್ಲೂಕಿಗೆ ಅನ್ಯಾಯ ಮಾಡಬಾರದು. ರೈತರ ಹಿತದೃಷ್ಟಿಯಿಂದ ಸರ್ಕಾರ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಧರಣಿ ಸತ್ಯಾಗ್ರಹದಲ್ಲಿ ಹುಲಸೂರ್ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಎಂ.ಜಿ. ರಾಜೋಳೆ, ಸಾಮಾಜಿಕ ಹೋರಾಟಗಾರ ಆಕಾಶ ಖಂಡಾಳೆ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ನೂರ ಅಹಮ್ಮದ್ ಮಾತನಾಡಿದರು.
ಈ ವೇಳೆ ರೈತ ಹೋರಾಟಗಾರ ಖಾಸಿಂ ಮಾಮು, ರೈತ ಮುಖಂಡ ವೀರಾರೆಡ್ಡಿ, ನಾಗಯ್ಯ ಸ್ವಾಮಿ, ಪ್ರವೀಣ್ ಕಾಡಾದಿ, ಬಸಪ್ಪ ಚೌರೆ, ರೈತ ಮಹಿಳೆ ತಂಗೆಮ್ಮ ಶೆಟಕರ್, ರಾಜಕುಮಾರ್ ತೊಂಡಾರೆ, ದೇವೇಂದ್ರ ಹಾಲಿಂಗೆ, ಸುನಿಲ್ ಭುಜಂಗೆ ಹಾಗೂ ಈರಪ್ಪ ಚೌರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.






