ಹುಲಸೂರು | ಕಂದಾಯ ಇಲಾಖೆ ಎಂದರೆ ತಾಯಿ ಇಲಾಖೆ ಇದ್ದಂತೆ : ತಹಶೀಲ್ದಾರ್ ಘಾಮಾವತಿ ರಾಠೋಡ್
ತೊಗಲೂರಿನಲ್ಲಿ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ

ಹುಲಸೂರು: ಕಂದಾಯ ಇಲಾಖೆಯು ತಾಯಿ ಇಲಾಖೆಯಿದ್ದಂತೆ. ಮಗುವಿನ ಜನನದಿಂದ ಮರಣದವರೆಗೆ ಜೀವನದ ವಿವಿಧ ಘಟ್ಟಗಳಿಗೆ ಸಂಬಂಧಿಸಿದ ಮಾಹಿತಿ, ದಾಖಲೆ ಹಾಗೂ ಪ್ರಮಾಣಪತ್ರಗಳನ್ನು ಒದಗಿಸುವ ಮಹತ್ವದ ಜವಾಬ್ದಾರಿ ಕಂದಾಯ ಇಲಾಖೆಯ ಮೇಲಿದೆ ಎಂದು ತಹಶೀಲ್ದಾರ್ ಘಾಮಾವತಿ ರಾಠೋಡ್ ತಿಳಿಸಿದರು.
ತಾಲೂಕಿನ ತೋಗಲೂರು ಗ್ರಾಮದಲ್ಲಿ ಶನಿವಾರ ನಡೆದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಯೋವೃದ್ಧರು ಹಾಗೂ ವಿಕಲಚೇತನರು ದೂರದ ಊರುಗಳಿಂದ ತಾಲೂಕು ಕಚೇರಿಗೆ ಬಂದು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ತೊಂದರೆಯಾಗಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಜಾ ಸೇವಾ ಆಂದೋಲನ ಹಮ್ಮಿಕೊಂಡಿದೆ. ಮಹಾತ್ಮ ಗಾಂಧಿ ಪಂಚಾಯತ್ ರಾಜ್ ವ್ಯವಸ್ಥೆಯ ಆಶಯದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ್ ಜಮ್ಮು ಮಾತನಾಡಿ, ವಸತಿ ವ್ಯವಸ್ಥೆ ಇಲ್ಲದವರು ಹಾಗೂ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುವ ಯೋಜನೆ ಜಾರಿಯಲ್ಲಿದೆ. ಅರ್ಹರು ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಅರಣ್ಯ ಇಲಾಖೆಯ ಅಧಿಕಾರಿ ರಾಘವೀಂದ್ರ ಮಾತನಾಡಿ, ರಸ್ತೆ ಬದಿಯಲ್ಲಿ ತೇಗಶ್ರೀ ಯೋಜನೆಯಡಿ ಮಹಾಗನಿ, ಸಾಗುವಾನಿ, ಹೆಬ್ಬೇವು ಸೇರಿದಂತೆ ವಿವಿಧ ಜಾತಿಯ ಮರಗಳನ್ನು ನೆಡುವ ವ್ಯವಸ್ಥೆ ಇದೆ ಎಂದು ಹೇಳಿದರು.
ಪಿಎಂ ಕಿಸಾನ್ ಯೋಜನೆಯಡಿ ಹಣ ಜಮೆಯಾಗದ ರೈತರು ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿ ಸಲಹೆ ನೀಡಿದರು. ತೋಟಗಾರಿಕೆ ಬೆಳೆಗಳಾದ ತರಕಾರಿ ಹಾಗೂ ಹಣ್ಣಿನ ಗಿಡಗಳನ್ನು ಬೆಳೆಯಲು ಇಲಾಖೆಯಿಂದ ನೆರವು ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೈತರಿಗೆ ಭರವಸೆ ನೀಡಿದರು.
ಇದೇ ವೇಳೆ ತೋಗಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅಭಿವೃದ್ಧಿ ಯೋಜನೆಯಡಿ 2016-17ನೇ ಸಾಲಿನಲ್ಲಿ ಸುಮಾರು 39 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕೊಳವೆ ಬಾವಿ ಸಾರ್ವಜನಿಕರ ಬಳಕೆಗೆ ಲಭ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಸುತ್ತಮುತ್ತಲಿನ ರೈತರು ಪೈಪ್‌ಗಳ ಮೂಲಕ ತಮ್ಮ ಜಮೀನುಗಳಿಗೆ ನೀರು ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದರು.
ತೋಗಲೂರು ಗ್ರಾಮ ಲೆಕ್ಕಾಧಿಕಾರಿ ಉಮೇಶ್ ಪೂಜಾರ್ ಅವರು ಫಲಾನುಭವಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಹಾಗೂ ನಿಗದಿತ ಸಮಯದಲ್ಲಿ ಜನರಿಗೆ ಲಭ್ಯವಾಗುತ್ತಿಲ್ಲ. ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು.
ಪ್ರಜಾ ಸೇವಾ ಆಂದೋಲನದಲ್ಲಿ ಕಂದಾಯ ಇಲಾಖೆಗೆ 63, ತಾಲೂಕು ಪಂಚಾಯಿತಿಗೆ 7, ಗ್ರಾಮ ಪಂಚಾಯಿತಿಗೆ 19, ಸಿಡಿಪಿಒಗೆ 2 ಹಾಗೂ ಜೆಸ್ಕಾಂ ಎಇಇಗೆ 2 ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಒಟ್ಟು 93 ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ, ಯಾವುದೇ ಅರ್ಜಿಯೂ ವಿಲೇವಾರಿಯಾಗಿರಲಿಲ್ಲ. ಕಾರ್ಯಕ್ರಮಕ್ಕೆ ಗೈರುಹಾಜರಾದ ಅಧಿಕಾರಿಗಳಿಗೆ ತಹಸೀಲ್ದಾರ್ ನೋಟಿಸ್ ಜಾರಿ ಮಾಡಿದರು.
ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ಸುನೀಲಕುಮಾರ್ ಸಜ್ಜನಶೆಟ್ಟಿ, ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಶಿವರಾಜ ಕನಕಟ್ಟೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀಬಾಯಿ ಧಬಾಲೆ, ಉಪಾಧ್ಯಕ್ಷ ಶಶಿರಾವ್ ರಾಜೋಳೆ, ಪಿಡಿಒ ಭೀಮು ಪೂಜಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಶರಣು ಪವಾಡಶೇಟ್ಟಿ ಕಾರ್ಯಕ್ರಮ ನಿರೂಪಿಸಿದರು.






