ಹುಲಸೂರ್ | ವೇದ ಸಂಗೀತ ಪರಂಪರೆಗೆ ವಿರೂಪಾಕ್ಷಯ್ಯ ಸ್ವಾಮಿಗಳ ಕೊಡುಗೆ ಅಪಾರ: ಸೋಮನಾಥ್ ಪಾಟೀಲ್

ಹುಲಸೂರ್ : ದೇಶದ ವೇದ ಸಂಗೀತ ಪರಂಪರೆಗೆ ವಿರೂಪಾಕ್ಷಯ್ಯ ಸ್ವಾಮಿ ಅವರ ಕೊಡುಗೆ ಅಪಾರವಾಗಿದೆ ಎಂದು ಬೀದರ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ್ ಪಾಟೀಲ್ ಹೇಳಿದರು.
ತಾಲ್ಲೂಕಿನ ಗೋರಟಾ ಗ್ರಾಮದಲ್ಲಿ ನಡೆದ ಸಂಗೀತ ರುದ್ರೇಶ್ವರ 4ನೇ ಜಾತ್ರಾ ಮಹೋತ್ಸವ, ವಿರೂಪಾಕ್ಷಯ್ಯ ಸ್ವಾಮಿಗಳ 14ನೇ ಹಾಗೂ ಪೂಜ್ಯ ವೀರಮ್ಮ ತಾಯಿಯವರ 9ನೇ ಪುಣ್ಯಾರಾಧನೆ, ಕಲ್ಯಾಣ ಕರ್ನಾಟಕ 7ನೇ ಪ್ರಾಂತೀಯ ಸಂಗೀತ ಸಮ್ಮೇಳನ ಮತ್ತು ‘ಪಂ. ವಿರೂಪಾಕ್ಷ ಸಮ್ಮಾನ್’ ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವೇದದ ರುದ್ರಮಂತ್ರಗಳಿಗೆ ಸಂಗೀತ ಸಂಯೋಜಿಸಿ ದೇಶಾದ್ಯಂತ ರುದ್ರ ಸಂಗೀತ ಕಾರ್ಯಕ್ರಮಗಳನ್ನು ನೀಡುವ ಮೂಲಕ ವಿರೂಪಾಕ್ಷಯ್ಯ ಸ್ವಾಮಿಗಳು ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.
1948ರ ಗೋರಟಾ ರಜಾಕಾರ ಹತ್ಯಾಕಾಂಡ ಕುರಿತು ‘ಭುಲಾಯಿ ಪದ’ ಗ್ರಂಥ ರಚಿಸಿ ಹುತಾತ್ಮರ ಬಗ್ಗೆ ಜನಜಾಗೃತಿ ಮೂಡಿಸಿದ್ದರು. ಗೋರಟಾ ಹುತಾತ್ಮ ಸ್ಮಾರಕ ನಿರ್ಮಾಣಕ್ಕೂ ಅವರು ಪ್ರೇರಕರಾಗಿದ್ದರು ಎಂದು ಸ್ಮರಿಸಿದರು.
‘ಪಂ. ವಿರೂಪಾಕ್ಷ ಸಮ್ಮಾನ್’ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಹಾರ್ಮೋನಿಯಂ ಕಲಾವಿದ ರಾಜೇಂದ್ರ ಸಿಂಗ್ ಪವಾರ್ ಮಾತನಾಡಿ, “ಶ್ರೀ ರುದ್ರಕ್ಕೆ ಸಂಗೀತ ಸಂಯೋಜಿಸಿದ ದೇಶದ ಮೊದಲ ಕಲಾವಿದ ವಿರೂಪಾಕ್ಷಯ್ಯ ಸ್ವಾಮಿಗಳು. ಅವರ ರುದ್ರ ಸಂಗೀತ ಕೇಳುತ್ತಲೇ ನಾವು ಬೆಳೆದವರು” ಎಂದರು.
1960ರ ದಶಕದಲ್ಲಿ ಗೋರಟಾದಲ್ಲಿ ಶಾರದಾ ಸಂಗೀತ ವಿದ್ಯಾಲಯ ಸ್ಥಾಪಿಸಿ ನೂರಾರು ಮಂದಿಗೆ ಸಂಗೀತ ಶಿಕ್ಷಣ ನೀಡಿದ್ದರು. 1958ರಲ್ಲಿ ಹೈದರಾಬಾದ್ ಕರ್ನಾಟಕ ಪ್ರಾಂತೀಯ ಸಂಗೀತ ಸಮ್ಮೇಳನ ಆಯೋಜಿಸಿ ಈ ಭಾಗಕ್ಕೆ ವಿಶೇಷ ಕೀರ್ತಿ ತಂದಿದ್ದರು ಎಂದು ಹೇಳಿದರು.
ಸಂಸ್ಥಾನದ ಅಧಿಪತಿ ರಾಜಶೇಖರ್ ಶಿವಾಚಾರ್ಯ ಸ್ವಾಮಿ ಮಾತನಾಡಿ, ಗೋರಟಾ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಪ್ರಮುಖ ವಿದ್ಯಾಕೇಂದ್ರವಾಗಿತ್ತು. ವಿರೂಪಾಕ್ಷಯ್ಯ ಸ್ವಾಮಿಗಳ ಸಂಕಲ್ಪದಂತೆ ಸಂಗೀತ ರುದ್ರೇಶ್ವರ ದೇವಾಲಯ ಹಾಗೂ 81 ಅಡಿ ಎತ್ತರದ ಗೋಪುರ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀಶೈಲದ ಕರುಣಾದೇವಿ ಮಾತಾ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಡಾ. ಸಿದ್ದರಾಮಯ್ಯ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ‘ಪಂ. ವಿರೂಪಾಕ್ಷ ಸಮ್ಮಾನ್’ ರಾಷ್ಟ್ರೀಯ ಪ್ರಶಸ್ತಿಯನ್ನು ರಾಜೇಂದ್ರ ಸಿಂಗ್ ಪವಾರ್ ಅವರಿಗೆ ಹಾಗೂ ರಾಜ್ಯ ಪ್ರಶಸ್ತಿಯನ್ನು ರೇವಪ್ಪ ಪಾಂಚಾಳ್ ಅವರಿಗೆ ಪ್ರದಾನಿಸಲಾಯಿತು.
ಈ ಸಂದರ್ಭದಲ್ಲಿ ಕರುಣಾದೇವಿ, ರಾಜಶೇಖರ್ ಸ್ವಾಮೀಜಿ, ಡಾ, ಸಿದ್ದರಾಮಯ್ಯ ಸ್ವಾಮಿ, ಸಂಗಮೇಶ್ ಬಿರಾದಾರ್, ಕರಬಸಪ್ಪ ಅಕ್ಕಣ್ಣ ಮುಂತಾದವರು ಇದ್ದರು. ಪ್ರೊ. ರುದ್ರೇಶ್ವರ್ ಸ್ವಾಮಿ ವಂದಿಸಿದರು. ಬಸವರಾಜ್ ಹಾಲಹಳ್ಳಿ ನಿರೂಪಿಸಿದರು.






