ಹುಲಸೂರ್ | ಗಾಂಧಿ–ಅಂಬೇಡ್ಕರ್ ಚಿಂತನೆಗಳು ಯುವಕರಿಗೆ ಅವಶ್ಯ: ಭೀಮಾಶಂಕರ್ ಬಿರಾದಾರ್

ಹುಲಸೂರ್ : ಮಹಾತ್ಮಾ ಗಾಂಧೀಜಿ ಹಾಗೂ ಡಾ. ಅಂಬೇಡ್ಕರ್ ಅವರ ಬರಹಗಳು, ಆಲೋಚನೆಗಳು ಮತ್ತು ತಾತ್ವಿಕ ಚಿಂತನೆಗಳು ಯುವ ಸಮುದಾಯಕ್ಕೆ ಇಂದು ಅತ್ಯಂತ ಅಗತ್ಯವಾಗಿವೆ ಎಂದು ಬಸವಕಲ್ಯಾಣದ ಬಸವೇಶ್ವರ್ ಪದವಿ ಕಾಲೇಜಿನ ಉಪನ್ಯಾಸಕ ಭೀಮಾಶಂಕರ್ ಬಿರಾದಾರ್ ಹೇಳಿದರು.
ಗುರುವಾರ ಹುಲಸೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ವತಿಯಿಂದ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಹಳ್ಳಿಗಳು ಇಂದು ಅಂತಃಕರಣ ಮತ್ತು ಬೌದ್ಧಿಕತೆಯ ಬರವನ್ನು ಎದುರಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.
ಪಠ್ಯದ ನಿಕಟ ಓದು, ವಿಮರ್ಶೆ ಮತ್ತು ಸಂಶೋಧನೆಯ ಮೂಲಕ ಪ್ರಭುತ್ವದ ನೆಲೆ, ಆರ್ಥಿಕ ಸಂಬಂಧಗಳು ಹಾಗೂ ಸಮಾಜದ ಸಂಕೀರ್ಣತೆಗಳನ್ನು ಅರ್ಥಮಾಡಿಕೊಳ್ಳಬಹುದು. ಅಭಿವೃದ್ಧಿ ಮತ್ತು ಭೌತಿಕ ಬೆಳವಣಿಗೆಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ಭಾರೀ ಹಾನಿ ನಡೆಯುತ್ತಿದ್ದು, ನೀರು, ನೆಲ, ಕಾಡು ಸೇರಿದಂತೆ ಸಮಗ್ರ ಜೀವಜಗತ್ತನ್ನು ಕಾಪಾಡುವುದು ಅಗತ್ಯವಾಗಿದೆ ಎಂದು ಹೇಳಿದರು.
ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಕಾಂಬಳೆ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವುದರ ಜೊತೆಗೆ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದರು. ಜೊತೆಗೆ ಆರೋಗ್ಯ ಜಾಗೃತಿ, ಜ್ಞಾನ ವಿಸ್ತರಣೆ, ಶಿಸ್ತು ಹಾಗೂ ಸಮಯಪ್ರಜ್ಞೆ ಬೆಳೆಸುವಲ್ಲಿ ಎನ್‌ಎಸ್‌ಎಸ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಪತ್ರಕರ್ತ ರಾಜಕುಮಾರ ಹೊನ್ನಾಡೆ ಮಾತನಾಡಿ, ಈ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಶೈಕ್ಷಣಿಕವಾಗಿ ಮುಂದುವರಿಯಲು ಈ ಕಾಲೇಜು ದಾರಿದೀಪವಾಗಿದ್ದು, ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ನಂತರ ಸಂಶೋಧನಾ ಕ್ಷೇತ್ರಕ್ಕೆ ಪ್ರವೇಶಿಸಲು ಪ್ರೇರಣೆಯಾಗಲಿ ಎಂದು ಆಶಿಸಿದರು.
ಈ ವೇಳೆ ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಡಾ. ಲಕ್ಷ್ಮೀಕಾಂತ್ ಪಂಚಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಐಕ್ಯುಎಸಿ ಸಂಯೋಜಕ ದಿಲೀಪ್ ಪತಂಗೆ, ಪುಷ್ಪಾ ಕೋರೆ, ಡಾ. ಮಾರುತಿಕುಮಾರ್, ನಾಗರೆಡ್ಡಿ, ನಾಗಭೂಷಣ ಕೆ., ಶಕೀಲ್ ಅಹ್ಮದ್, ಬಾಬುಸಿಂಗ್, ಶಾಂತಲಿಂಗ್ ಧಬಾಲೆ, ಹಣಮಂತ್ ದಾಸೂರೆ ಹಾಗೂ ಡಾ. ರೂಪೇಶ್ ಭೋಸ್ಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವೈಷ್ಣವಿ ನಿರೂಪಿಸಿದರು. ಭವಾನಿ ಸ್ವಾಗತಿಸಿದರು. ರೇಣುಕಾ ವಂದಿಸಿದರು.






