ಹುಮನಾಬಾದ್ | ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಆರೋಪ: ಅಂಗನವಾಡಿ ಶಿಕ್ಷಕಿಯ ಅಮಾನತಿಗೆ ಆಗ್ರಹ

ಹುಮನಾಬಾದ್: ಬಸವಕಲ್ಯಾಣ ತಾಲೂಕಿನ ಹಾರಕೂಡ್ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ, ಸಂಬಂಧಿಸಿದ ಅಂಗನವಾಡಿ ಶಿಕ್ಷಕಿಯನ್ನು ತಕ್ಷಣ ಅಮಾನತು ಮಾಡಬೇಕು ಎಂದು ಭೀಮ್ ಆರ್ಮಿ ಹಾಗೂ ದಲಿತ ಸೇನೆ ಕಾರ್ಯಕರ್ತರು ಶನಿವಾರ ಹುಮನಾಬಾದ್‌ನಲ್ಲಿ ಒತ್ತಾಯಿಸಿದರು.
ಹಾರಕೂಡ್ ಗ್ರಾಮದ ಅಂಗನವಾಡಿ ಕೇಂದ್ರದ ಗೋಡೆಯ ಮೇಲೆ ವಿವಿಧ ಮಹಾಪುರುಷರ ಭಾವಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಆದರೆ ಡಾ.ಅಂಬೇಡ್ಕರ್ ಅವರ ಭಾವಚಿತ್ರವನ್ನು ಅಂಗನವಾಡಿಯ ಅಡುಗೆ ಕೋಣೆಯಲ್ಲಿ ಕೆಳಭಾಗದಲ್ಲಿ ಇಟ್ಟು ಅವಮಾನಿಸಲಾಗಿದೆ ಎಂದು ಆರೋಪಿಸಿದರು.
ಈ ಕುರಿತು ಬಸವಕಲ್ಯಾಣ ತಾಲೂಕಿನ ದಲಿತ ಸೇನೆ ವತಿಯಿಂದ ಸಿಡಿಪಿಓ ಅವರಿಗೆ ದೂರು ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ತಕ್ಷಣ ಅಂಗನವಾಡಿ ಶಿಕ್ಷಕಿಯನ್ನು ಅಮಾನತು ಮಾಡಬೇಕು. ಇಲ್ಲದಿದ್ದರೆ ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಿ ಹೋರಾಟ ನಡೆಸಲಾಗುವುದು ಎಂದು ಭೀಮ್ ಆರ್ಮಿ ಮತ್ತು ದಲಿತ ಸೇನೆ ಮುಖಂಡರು ಎಚ್ಚರಿಕೆ ನೀಡಿದರು.





