ಹುಮನಾಬಾದ್ | ನೀರಿನ ಸುರಕ್ಷತೆಯಲ್ಲಿ ನಿರ್ಲಕ್ಷ್ಯ ಆರೋಪ : ಸಿತಾಳಗೇರಾ ಪಿಡಿಒ ಅಮಾನತು

ಹುಮನಾಬಾದ್: ಕುಡಿಯುವ ನೀರಿನ ಸುರಕ್ಷತೆ ನಿರ್ಲಕ್ಷ್ಯ ವಹಿಸಿದ ಆರೋಪ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರಿಗೆ ಹಣವಿಲ್ಲದ (ಫೇಕ್) ಚೆಕ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿತಾಳಗೇರಾ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ಹೊರಡಿಸಿದ್ದಾರೆ.
ಸಿತಾಳಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಂಬೂರ್ ಗ್ರಾಮದಲ್ಲಿ ಅಶುದ್ಧ ಕುಡಿಯುವ ನೀರಿನಿಂದ ಸಾರ್ವಜನಿಕರು ಅಸ್ವಸ್ಥಗೊಂಡು ಹುಡಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಗ್ರಾಮದ ಬೋರ್‌ವೆಲ್ ಕೇಸಿಂಗ್ ಸುಮಾರು 30 ವರ್ಷ ಹಳೆಯದಾಗಿದ್ದು, ಮಿನಿ ವಾಟರ್ ಟ್ಯಾಂಕ್ ಸ್ವಚ್ಛಗೊಳಿಸಿರುವ ದಾಖಲೆಯೂ ಇಲ್ಲದಿರುವುದು ಕಂಡುಬಂದಿದೆ ಎಂದು ಆರೋಪಿಸಲಾಗಿದೆ.
ಇದರ ಜೊತೆಗೆ ಗ್ರಾಮ ಪಂಚಾಯಿತಿ ಸದಸ್ಯ ಸೋಮಣ್ಣ ಅವರಿಗೆ ಗೌರವಧನದ ಚೆಕ್ ನೀಡಲಾಗಿತ್ತು. ಆದರೆ ಚೆಕ್ ಬ್ಯಾಂಕ್‌ಗೆ ಸಲ್ಲಿಸಿದಾಗ ಪಂಚಾಯಿತಿ ಖಾತೆಯಲ್ಲಿ ಹಣ ಇಲ್ಲದಿರುವುದು ಗೊತ್ತಾಗಿದ್ದು, ಹಣವಿಲ್ಲದ ಚೆಕ್ ನೀಡಿರುವ ಆರೋಪ ಕೇಳಿಬಂದಿತ್ತು.
ಬಳಿಕ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗಿದ್ದರೂ, ಇಂತಹ ಪ್ರಕರಣಗಳು ಮರುಕಳಿಸದಂತೆ ಪಿಡಿಒ ಅವರಿಗೆ ಸೂಚನೆ ನೀಡಲಾಗಿತ್ತು. ಆದಾಗ್ಯೂ ಪದೇ ಪದೇ ಆಡಳಿತಾತ್ಮಕ ಲೋಪಗಳು ಮತ್ತು ನಿರ್ಲಕ್ಷ್ಯಗಳು ಕಂಡುಬಂದ ಹಿನ್ನೆಲೆಯಲ್ಲಿ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.






