ಹುಮನಾಬಾದ್ | ಈದ್ ಮಿಲಾದ್ ಅಂಗವಾಗಿ ರಕ್ತದಾನ ಶಿಬಿರ

ಹುಮನಾಬಾದ್: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಈದ್-ಎ-ಮಿಲಾದ್ ಪ್ರಯುಕ್ತ ಗುಲಾಸ್ತಾನ್-ಎ-ಉರ್ದು ಅದಾಬ್ ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಶಿಬಿರದಲ್ಲಿ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಭಾಗವಹಿಸಿ ಮಾತನಾಡಿ, ಕಳೆದ ವರ್ಷ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 100 ಜನರು ರಕ್ತದಾನ ಮಾಡಿದ್ದರು. ಈ ಬಾರಿ 100ರ ಗಡಿ ದಾಟುವ ನಿರೀಕ್ಷೆಯಿದೆ ಎಂದು ಹೇಳಿದರು.
ರಕ್ತದಾನ ಮಹಾದಾನವಾಗಿದ್ದು, ಒಬ್ಬರು ನೀಡುವ ರಕ್ತ ಮತ್ತೊಬ್ಬರ ಜೀವ ಉಳಿಸಲು ಸಹಕಾರಿಯಾಗುತ್ತದೆ. ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ಶಾಂತಿ ಹಾಗೂ ಸಮಾನತೆಯ ಸಂದೇಶ ಸಾರಿದ್ದಾರೆ. ಅವರ ಆಶಯದಂತೆ ಸಮಾಜಕ್ಕೆ ನೆರವಾಗುವ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು ಎಂದು ಟ್ರಸ್ಟ್‌ನ ಮುಖಂಡರು ಹೇಳಿದರು.
ಈ ಸಂದರ್ಭದಲ್ಲಿ ಟ್ರಸ್ಟ್‌ನ ಅಧ್ಯಕ್ಷ ಶಮ್ಸ್ ತಬ್ರೇಝ್, ಉಪಾಧ್ಯಕ್ಷ ಮೀನಾಜುದ್ದಿನ್, ಕಾರ್ಯದರ್ಶಿ ಉಬೈದ್, ಪ್ರಧಾನ ಕಾರ್ಯದರ್ಶಿ ಮುಫಾಸ್ಸಿರ್, ಖಜಾಂಚಿ ಮಜರ್, ಸೈಯದ್ ಜಫರ್, ಯುವ ವಕೀಲ ತೌಸೀಫ್ ಹಾಗೂ ಸಾಬೀರ್ ಷಾ ಸೇರಿದಂತೆ ಇತರರು ಉಪಸ್ಥಿತರಿದ್ದರು.




