ಹುಮನಾಬಾದ್ | ಎಸ್ಪಿ ವಿರುದ್ಧ ಪ್ರಕರಣ ದಾಖಲಿಸಲು ಡಿವೈಎಸ್ಪಿ ಕಚೇರಿಗೆ ಮುತ್ತಿಗೆ: ಅಂಕುಶ್ ಗೋಖಲೆ

ಹುಮನಾಬಾದ್ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಮೇ 16ರಂದು ಹುಮನಾಬಾದ್ ಡಿವೈಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಜನರ ಧ್ವನಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಂಕುಶ್ ಗೋಖಲೆ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಔರಾದ್ ಪಟ್ಟಣದಲ್ಲಿ ದಲಿತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಲಾಗಿದೆ. ಆದರೆ ಬಾಲಕಿ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುಳ್ಳು ಪ್ರಕರಣ ದಾಖಲಿಸಿ ಘಟನೆ ಮುಚ್ಚಿಹಾಕಲು ಪೊಲೀಸರು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.
“ಕುಸ್ತಿ ತರಬೇತಿ ನೀಡುವುದಾಗಿ ಹೇಳಿ ಲಖನ್ ಪವಾರ್ ಎಂಬಾತ ಬಾಲಕಿಯನ್ನು ಸುಮಾರು ಎರಡು ವರ್ಷಗಳಿಂದ ಮನೆಯಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದ. ಬಾಲಕಿಯ ಪೋಷಕರಿಂದ 1.30 ಲಕ್ಷ ರೂ. ಹಣ ಬೇಡಿಕೆ ಇಟ್ಟಿದ್ದು, ಅವರು 60 ಸಾವಿರ ರೂ. ನೀಡಿದ್ದಾರೆ. ಉಳಿದ ಹಣ ನೀಡದಿದ್ದರೆ ಬಾಲಕಿಯನ್ನು ಕರೆದುಕೊಂಡು ಹೋಗುವುದಾಗಿ ಬೆದರಿಕೆ ಹಾಕಿದ್ದ” ಎಂದು ದೂರಿದರು.
ನಂತರ ಬಾಲಕಿಯನ್ನು ಔರಾದ್‌ನ ಬಾಡಿಗೆ ಮನೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆರೋಪಿಯ ವಿರುದ್ಧ ಪೋಕ್ಸೋ, ಲೈಂಗಿಕ ದೌರ್ಜನ್ಯ ಹಾಗೂ ಕೊಲೆ ಪ್ರಕರಣ ದಾಖಲಿಸಬೇಕಾಗಿದ್ದರೂ, ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿ ಮುಚ್ಚುವ ಕೆಲಸ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.
ಈ ಹಿನ್ನೆಲೆಯಲ್ಲಿ ಮೇ 16ರಂದು ಹುಮನಾಬಾದ್ ಡಿವೈಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಹಾಗೂ ಆರೋಪಿ ಲಖನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಅವರು ಕರೆ ನೀಡಿದರು.
ಈ ಸಂಧರ್ಭದಲ್ಲಿ ದಲಿತ ಮುಖಂಡರಾದ ಬಾಬು ಟೈಗರ್, ಪ್ರಭುರಾವ್ ತಾಳಮಡಗಿ, ಗಜೇಂದ್ರ ಕನಕಟ್ಟಾಕರ್, ಶಿವಪುತ್ರ ಮಾಳಗೆ, ಶಿವರಾಜ್ ಚಿನಕೇರಿ ಹಾಗೂ ಜಯರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






