ಹುಮನಾಬಾದ್ | ಈದ್ ಮಿಲಾದ್ ಪ್ರಯುಕ್ತ ಘೋಡವಾಡಿ ಗ್ರಾಮದಲ್ಲಿ ಸಾಮೂಹಿಕ ರಕ್ತದಾನ ಶಿಬಿರ

ಹುಮನಾಬಾದ್: ಪವಿತ್ರ ಈದ್ ಮಿಲಾದ್ ಹಬ್ಬದ ಅಂಗವಾಗಿ ತಾಲೂಕಿನ ಘೋಡವಾಡಿ ಗ್ರಾಮದ ಐತಿಹಾಸಿಕ ಹಜ್ರತ್ ಸೈಯದ್ ಇಸ್ಮಾಯಿಲ್ ಷಾ ಖಾದ್ರಿ ದರ್ಗಾದಲ್ಲಿ ದರ್ಗಾ ಹಜ್ರತ್ ಸೈಯದ್ ಇಸ್ಮಾಯಿಲ್ ಷಾ ಖಾದ್ರಿ ಮುತ್ತವಲ್ಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಂಗಳವಾರ ಸಾಮೂಹಿಕ ರಕ್ತದಾನ ಶಿಬಿರ ಆಯೋಜಿಸಲಾಯಿತು.
ಶಿಬಿರದಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಗುಲಾಮ್ ದಸ್ತಗೀರ್, ಈದ್ ಮಿಲಾದ್ ಹಬ್ಬದ ಆರಂಭವನ್ನು ಸಮಾಜೋಪಯೋಗಿ ಕಾರ್ಯದಿಂದ ಮಾಡಬೇಕೆಂಬ ಉದ್ದೇಶದಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಗ್ರಾಮಸ್ಥರು ಹಾಗೂ ಯುವಕರು ಉತ್ಸಾಹದಿಂದ ಸಹಕರಿಸಿರುವುದು ಸಂತಸದ ವಿಷಯ ಎಂದು ಹೇಳಿದರು.
ಟ್ರಸ್ಟ್ ವಕ್ತಾರ ಮೊಹಮ್ಮದ್ ಉಸ್ಮಾನ್ ಅಹ್ಮದ್ ಮಗರಬಿ ಮಾತನಾಡಿ, ಸುಮಾರು 500 ವರ್ಷದ ಇತಿಹಾಸ ಹೊಂದಿರುವ ದರ್ಗಾದಲ್ಲಿ ಇದೇ ಮೊದಲ ಬಾರಿಗೆ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಪವಿತ್ರ ಪ್ರವಾದಿ ಮುಹಮ್ಮದ್ (ಸ) ಅವರ ಶಾಂತಿ, ಸೇವೆ ಮತ್ತು ಮಾನವೀಯತೆಯ ಸಂದೇಶವನ್ನು ಮುಂದಿಟ್ಟುಕೊಂಡು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರವಾದಿ ಮುಹಮ್ಮದ್ (ಸ) ಅವರು ಇಡೀ ಮಾನವಕುಲಕ್ಕೆ ಶಾಂತಿಯ ಸಂದೇಶ ಸಾರಿದವರು. ರಕ್ತದಾನದಂತಹ ಸೇವಾ ಕಾರ್ಯಗಳು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ; ಮಾನವಕುಲದ ಹಿತಕ್ಕಾಗಿ ನಡೆಯುವ ಕಾರ್ಯಗಳಾಗಿವೆ ಎಂದು ಅವರು ತಿಳಿಸಿದರು.
ಶಿಬಿರದಲ್ಲಿ ಗ್ರಾಮಸ್ಥರು, ಯುವಕರು ರಕ್ತದಾನ ಮಾಡಿ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪೀರಸಾಬ್ ಮುತ್ತವಲ್ಲಿ, ಜಾವಿದ್ ಹನ್ನು, ಮತಿನ್, ಜಮೀರ್ ರಾಜೇ, ಗುಲಾಮ್ ರಸೂಲ್ ಅಮ್ಜದಿ, ಅಯ್ಯುಬ್ ಮುಜಾವರ್, ನಿಜಾಮುದ್ದಿನ್, ರಿಯಾಜ್ ಮಿಯಾ ಬಾಗಿ, ಖಾದರಮಿಯಾ ಮುತ್ತವಲ್ಲಿ, ಜಾಕೆರ್ ಕಂದಗುಳೆ, ರಾಯಿಸ್ ಕಂದಗುಳೆ, ಗೌಸ್ ಪಾಷಾ ಮುತ್ತವಲ್ಲಿ, ಅಮನ್ ಮಗರಬಿ ಸೇರಿದಂತೆ ಗ್ರಾಮದ ಅನೇಕ ಯುವಕರು, ಟ್ರಸ್ಟ್‌ನ ಪ್ರಮುಖರು ಉಪಸ್ಥಿತರಿದ್ದರು.






