ಹುಮನಾಬಾದ್ | ರಜಪೂತ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಆಗ್ರಹಿಸಿ ಮನವಿ

ಹುಮನಾಬಾದ್ : ರಾಜ್ಯದಲ್ಲಿ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ರಜಪೂತ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ತಕ್ಷಣವೇ ರಜಪೂತ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿ ಬುಧವಾರ ತಹಶೀಲ್ದಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ, ರಾಜ್ಯದಲ್ಲಿ ಲಕ್ಷಾಂತರ ಜನಸಂಖ್ಯೆ ಹೊಂದಿರುವ ರಜಪೂತ ಸಮಾಜವು ಉದ್ಯೋಗ, ಶಿಕ್ಷಣ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಇನ್ನೂ ಹಿಂದುಳಿದಿದ್ದು, ಯುವಜನತೆಗೆ ಅಗತ್ಯ ಪ್ರೋತ್ಸಾಹ ಮತ್ತು ಮಾರ್ಗದರ್ಶನದ ಕೊರತೆಯಿಂದ ಸಮಾಜವು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಲಾಗಿದೆ.
ಕಲಬುರಗಿ ಜಿಲ್ಲಾಡಳಿತ ನಡೆಸಿರುವ ರಜಪೂತ ಸಮಾಜದ ಕೌಟುಂಬಿಕ ಸಮೀಕ್ಷೆ ಹಾಗೂ ಡಿಜಿಟಲ್ ನೋಂದಣಿ ಪ್ರಕ್ರಿಯೆ ಯಶಸ್ವಿಯಾಗಿದ್ದು, ಅದರ ವರದಿ ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗದ ಪರಿಶೀಲನೆಯಲ್ಲಿದೆ. ಈ ಅಭಿಯಾನದಿಂದ ರಾಜ್ಯಾದ್ಯಂತ ರಜಪೂತ ಸಮಾಜದ ಸಂಘಟನೆ ಮತ್ತಷ್ಟು ಬಲಗೊಂಡಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಕಲಬುರಗಿಯಲ್ಲಿ ಆರಂಭವಾದ ಈ ಪ್ರಕ್ರಿಯೆಗೆ ಬೆಂಬಲವಾಗಿ ಇದೀಗ ಹುಮನಾಬಾದ್ ತಾಲೂಕಿನ ರಜಪೂತ ಸಮುದಾಯವೂ ಧ್ವನಿಗೂಡಿಸಿದ್ದು, ಸಮಾಜದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗಾಗಿ ಸರ್ಕಾರ ಶೀಘ್ರವೇ ರಜಪೂತ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಬಾಬು ಸಿಂಗ್, ಕಲಾವತಿ, ರಾಮಲಾಲ್ ಸಿಂಗ್, ವಿಜಯಸಿಂಗ್, ಪ್ರಶಾಂತ್ ಸಿಂಗ್, ಜಯ ಸಿಂಗ್, ಮಹದೇವ್ ಸಿಂಗ್, ಗಣೇಶ್ ಸಿಂಗ್, ಸುಂದರ್ ಸಿಂಗ್, ಶಾಮಲಾಲ್ ಸಿಂಗ್, ಗೋವಿಂದ್ ಸಿಂಗ್ ಹಾಗೂ ರಜಪೂತ ಸಮಾಜದ ಅನೇಕ ಮುಖಂಡರು, ಯುವಕರು, ಮಹಿಳೆಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






