ಹುಮನಾಬಾದ್ | ನಾನು ಎಂಎಲ್ಎ ಆಗಿದ್ದಾಗ ಶಾಸಕ ಸಿದ್ದು ಪಾಟೀಲ್ ನಮ್ಮ ಬಾಗಿಲು ಕಾಯುತ್ತಿದ್ದರು : ರಾಜಶೇಖರ್ ಪಾಟೀಲ್

ಹುಮನಾಬಾದ್ : “ನನ್ನಿಂದ ನೀವು ಎಂಎಲ್ಎ ಆಗಿದ್ದೀರಿ” ಎಂಬ ಶಾಸಕ ಸಿದ್ದು ಪಾಟೀಲ್ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಮಾಜಿ ಸಚಿವ ರಾಜಶೇಖರ್ ಪಾಟೀಲ್, “ನಾನು ಎಂಎಲ್ಎ ಆಗಿದ್ದಾಗ ಸಿದ್ದು ಪಾಟೀಲ್ ನಮ್ಮ ಮನೆಯ ಬಾಗಿಲು ಕಾಯುತ್ತಿದ್ದವರು” ಎಂದು ತಿಳಿಸಿದ್ದಾರೆ.
ಮಂಗಳವಾರ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಡಿಪಿ ಸಭೆಯಲ್ಲಿ ಗಲಾಟೆ ನಡೆದ ಸಂದರ್ಭದಲ್ಲಿ ನಾನು ಮೈಸೂರಿಗೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಹೋಗಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುವ ಮಾಹಿತಿ ತಿಳಿದ ನಂತರ ಏರ್ಪೋರ್ಟ್‌ಗೆ ತೆರಳಿದ್ದೆ. ಅಲ್ಲಿ ಈ ಭಾಗದ ಘಟನೆ ಕುರಿತು ಕರೆ ಬಂದ ತಕ್ಷಣವೇ ವಿಮಾನದ ಮೂಲಕ ಹೈದರಾಬಾದ್ ಮಾರ್ಗವಾಗಿ ವಾಪಸ್ಸಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಶಾಸಕ ಸಿದ್ದು ಪಾಟೀಲ್ ಅವರು ಹುಮನಾಬಾದ್‌ನಲ್ಲಿ ಪದೇಪದೇ ಗುಂಡಾ ವರ್ತನೆ ತೋರಿಸುತ್ತಿದ್ದು, ಯಾವುದೇ ಕಾರ್ಯಕ್ರಮದಲ್ಲಾದರೂ ದಮ್ಮು–ತಾಕತ್ತು ಎಂಬ ಭಾಷೆ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.
ಭೂಮಿ ಪೂಜೆ ಅಥವಾ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ಶಾಸಕರು ದಿನಾಂಕ ನಿಗದಿಪಡಿಸಿದರೆ ಕನಿಷ್ಠ ಏಳು ದಿನಗಳ ಮುಂಚಿತವಾಗಿ ಅಧಿಕಾರಿಗಳು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಮಾಹಿತಿ ನೀಡಬೇಕು ಎಂಬ ಪ್ರೊಟೋಕಾಲ್ ಇದೆ. ಆದರೆ ಇದನ್ನು ಸಿದ್ದು ಪಾಟೀಲ್ ನಿರಂತರವಾಗಿ ಉಲ್ಲಂಘಿಸುತ್ತಿದ್ದಾರೆ ಎಂದು ದೂರಿದರು.
ಚಿಟಗುಪ್ಪಾ ಪಟ್ಟಣದಲ್ಲಿ ಯಾವುದೇ ಪ್ರೊಟೋಕಾಲ್ ಪಾಲಿಸದೇ ತಮ್ಮ ಕಾರಲ್ಲೇ ಸಬ್ಬಲ್ ತೆಗೆದುಕೊಂಡು ಗುದ್ದಲಿ ಪೂಜೆಗೆ ಮುಂದಾದರು. ಇದನ್ನು ನಮ್ಮ ಕಾರ್ಯಕರ್ತರು ವಿರೋಧಿಸಿದಾಗ, ಪಿಎಸ್ಐಗೆ ಏಕವಚನದಲ್ಲಿ ಮಾತನಾಡಿ ಬೆದರಿಕೆ ಹಾಕಿದ್ದಾರೆ. ನಾನು 18 ವರ್ಷ ಶಾಸಕನಾಗಿ ಆಡಳಿತ ನಡೆಸಿದರೂ, ಯಾವ ಅಧಿಕಾರಿಯ ಮೇಲೂ ಇಂತಹ ದಬ್ಬಾಳಿಕೆ ನಡೆಸಿಲ್ಲ ಎಂದು ಹೇಳಿದರು.
ಸಿದ್ದು ಪಾಟೀಲ್ ಶಾಸಕರಾಗಲು ಯೋಗ್ಯರಲ್ಲ ಎಂದು ಟೀಕಿಸಿದ ಅವರು, ಹಿಂದೆ ಇವರು ಸಾರಾಯಿ ಪಾಕೆಟ್ ಮಾರಾಟ ಮಾಡುತ್ತಿದ್ದರು. ಈ ಕುರಿತು ಅವರ ಗೆಳೆಯನೇ ಹೇಳಿರುವ ವಿಡಿಯೋ ದಾಖಲೆಗಳಿವೆ. ನಾನು ಶಾಸಕ ಹಾಗೂ ಸಚಿವನಾಗಿದ್ದಾಗ ನನ್ನ ಬಳಿ ಕೆಲಸ ಮಾಡಿ ಬೆಳೆದ ವ್ಯಕ್ತಿಯೇ ಇವರು. ನಾನು ಬೆಂಗಳೂರಿಗೆ ಹೋಗುವ ಮೊದಲು ಇವರೂ ಅವರ ಸಹೋದರರೂ ಶಾಸಕರ ಭವನಕ್ಕೆ ಹೋಗಿ ನನಗಾಗಿ ಕಾಯುತ್ತಿದ್ದರು. ಇವರು ನನಗೆ ಶಾಸಕ ಮಾಡುತ್ತಾರೆ ಎನ್ನುವುದು ನಗಣೀಯ ಮಾತು ಎಂದು ಆಕ್ರೋಶ ವ್ಯಕ್ತಪಡಿಸಿದರು.







