ಹುಮನಾಬಾದ್ | ದುಬಲಗುಂಡಿ ಗ್ರಾಪಂ ಕಟ್ಟಡ ನಿರ್ಮಾಣದ ಹೆಸರಿನಲ್ಲಿ ಸರ್ಕಾರಿ ಹಣ ದುರ್ಬಳಕೆ ಆರೋಪ : ತನಿಖೆಗೆ ಒತ್ತಾಯ

ಹುಮನಾಬಾದ್: ತಾಲೂಕಿನ ದುಬಲಗುಂಡಿ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣದ ಹೆಸರಿನಲ್ಲಿ ಸರ್ಕಾರಿ ಹಣ ದುರ್ಬಳಕೆಯಾಗಿದೆ ಎಂದು ಆರೋಪಿಸಿರುವ ವಕೀಲ ವಿಜಯಕುಮಾರ್ ನಾತೆ, ಪ್ರಕರಣದ ಮರುತನಿಖೆ ಪೂರ್ಣಗೊಳ್ಳುವವರೆಗೆ ಹಳೆಯ ಕಟ್ಟಡ ತೆರವುಗೊಳಿಸಲು ಯಾವುದೇ ಅನುಮತಿ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ತಹಸೀಲ್ದಾರ್ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ, ದುಬಲಗುಂಡಿ ಗ್ರಾಮ ಪಂಚಾಯಿತಿಯ ಹಳೆಯ ಕಟ್ಟಡವು ನಿಜಾಮರ ಆಡಳಿತದ ಕಾಲದ ಠಾಣಾ ಕಟ್ಟಡವಾಗಿದ್ದು, ಐತಿಹಾಸಿಕ ಮಹತ್ವ ಹೊಂದಿದೆ. ಹೀಗಾಗಿ ಕಟ್ಟಡ ತೆರವುಗೊಳಿಸುವ ಮುನ್ನ ಪುರಾತತ್ವ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.
2025ರಲ್ಲಿ ಅಂದಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಘುನಾಥ್, ಮಾಜಿ ಅಧ್ಯಕ್ಷ ನಾಗರಾಜ್ ಭೋಜಗುಂಡಿ ಹಾಗೂ ಗುತ್ತಿಗೆದಾರ ಗಣಪತಿ ಅವರು ಹೊಸ ಕಟ್ಟಡ ನಿರ್ಮಿಸದೆ, ಎಂ.ಬಿ. ದಾಖಲೆ ಮಾಡದೆ, ಸರ್ಕಾರದ ₹8 ಲಕ್ಷ ಹಣವನ್ನು ದುರ್ಬಳಕೆ ಮಾಡಿಕೊಂಡು ಗುತ್ತಿಗೆದಾರರ ಹೆಸರಿಗೆ ವರ್ಗಾಯಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಅಲ್ಲದೆ, ಹಿಂದಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸುಮಾರು 10 ತಿಂಗಳಿಂದ ಸಾಮಾನ್ಯ ಸಭೆ ಕರೆಯದೆ, ಸಭೆಯ ಅನುಮತಿಯಿಲ್ಲದೇ ಕಟ್ಟಡ ತೆರವುಗೊಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿ ಎಇಇ ಅವರಿಂದ ಆದೇಶ ಪಡೆದಿದ್ದಾರೆ ಎಂದು ದೂರಿದ್ದಾರೆ.
ಈ ಕುರಿತು ಮೇ 20ರಂದು ತಾಲೂಕು ಪಂಚಾಯಿತಿ ಇಒ ಅವರಿಗೆ ದೂರು ಸಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಹಣ ವಸೂಲಿ ಮಾಡುವಂತೆ ಮನವಿ ಮಾಡಿದ್ದೇನೆ. ಆದರೆ, ಪ್ರಕರಣದ ತನಿಖೆಯನ್ನು ದಿಕ್ಕುತಪ್ಪಿಸಿ ಅಕ್ರಮವನ್ನು ಮುಚ್ಚಿಹಾಕುವ ಉದ್ದೇಶದಿಂದ ಹಳೆಯ ಕಟ್ಟಡ ತೆರವುಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಈಗಾಗಲೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹೊಸ ಕಟ್ಟಡ ನಿರ್ಮಾಣವಾಗಿಲ್ಲ ಎಂದು ವರದಿ ನೀಡಿದ್ದರೂ, ಇಒ ಅವರು ವಿಚಾರಣೆಯ ನೆಪದಲ್ಲಿ ಅಂದಿನ ಪಿಡಿಒ, ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರರಿಗೆ ನೆರವಾಗುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ವಿಜಯಕುಮಾರ್ ನಾತೆ ದೂರಿದ್ದಾರೆ.
ಆದ್ದರಿಂದ ಮರುತನಿಖೆ ಪೂರ್ಣಗೊಳ್ಳುವವರೆಗೆ ಹಳೆಯ ಕಟ್ಟಡ ತೆರವುಗೊಳಿಸಲು ಯಾವುದೇ ಅನುಮತಿ ನೀಡಬಾರದು. ಪ್ರಕರಣದಲ್ಲಿ ತಾಲೂಕು ಪಂಚಾಯಿತಿ ಇಒ ಅವರನ್ನೂ ಹೊಣೆಗಾರರನ್ನಾಗಿ ಮಾಡಬೇಕು. ಆ.10ರಂದು ನಡೆಯಲಿರುವ ವಿಚಾರಣೆಯಲ್ಲಿ ಅಂತಿಮ ತೀರ್ಮಾನ ಕೈಗೊಂಡು, ದುರ್ಬಳಕೆಯಾಗಿದೆ ಎನ್ನಲಾದ ಹಣ ಹಾಗೂ ಕಟ್ಟಡದ ಸ್ಥಿತಿಗತಿಗಳ ಕುರಿತು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಬೇಡಿಕೆಗಳಿಗೆ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕ ಹಿತದೃಷ್ಟಿಯಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.






