ಹುಮನಾಬಾದ್ | ಶಾಸಕ ಡಾ.ಸಿದ್ಧು ಪಾಟೀಲ್ ನೇತೃತ್ವದಲ್ಲಿ ‘ಬಿಎಸ್‌ಎಸ್‌ಕೆ ಬಚಾವ್ ಪಾದಯಾತ್ರೆ’
ಹಳ್ಳಿಖೇಡ್ (ಬಿ) ಸಕ್ಕರೆ ಕಾರ್ಖಾನೆಗೆ ಲೀಸ್ ನೀಡಿ ಪುನರಾರಂಭಿಸುವಂತೆ ಆಗ್ರಹ

ಹುಮನಾಬಾದ್: ಸಾಲದ ಸುಳಿಯಲ್ಲಿ ಸಿಲುಕಿ ಸ್ಥಗಿತಗೊಂಡಿರುವ ಹಳ್ಳಿಖೇಡ್ (ಬಿ) ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸುವಂತೆ ಒತ್ತಾಯಿಸಿ ಶಾಸಕ ಡಾ.ಸಿದ್ಧು ಪಾಟೀಲ್ ನೇತೃತ್ವದಲ್ಲಿ ನಗರದಿಂದ ಕಾರ್ಖಾನೆವರೆಗೆ ‘ಬಿಎಸ್‌ಎಸ್‌ಕೆ ಬಚಾವ್ ಪಾದಯಾತ್ರೆ’ ಬುಧವಾರ ನಡೆಯಿತು.
ನಗರದ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಪಾದಯಾತ್ರೆ ಸುಮಾರು 35 ಕಿ.ಮೀ. ಸಂಚರಿಸಿ ಸಂಜೆ ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ತಲುಪಿತು. ಪಾದಯಾತ್ರೆಯಲ್ಲಿ ರೈತರು, ಬಿಜೆಪಿ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ.ಸಿದ್ಧು ಪಾಟೀಲ್, ರೈತರು ತೋರಿದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿ, “ರೈತರು ನನಗೆ ಆಶೀರ್ವಾದ ನೀಡಿದರೆ ಬಿಎಸ್‌ಎಸ್‌ಕೆ ಕಾರ್ಖಾನೆಯನ್ನು ಪುನರಾರಂಭ ಮಾಡಿಸುತ್ತೇನೆ” ಎಂದು ಹೇಳಿದರು.
ಬಿಎಸ್‌ಎಸ್‌ಕೆ ಕಾರ್ಖಾನೆ ಮತ್ತು ರೈತರ ಸಂಬಂಧ ತಾಯಿ–ಮಗನ ಬಾಂಧವ್ಯದಂತಿದೆ. ಕಾರ್ಖಾನೆಯನ್ನು ಲೀಸ್‌ಗೆ ನೀಡಿ ಪುನರಾರಂಭಿಸಬೇಕು. ಅಗತ್ಯವಿದ್ದರೆ ವಿಧಾನಸೌಧದ ಒಳಗೂ ಹೊರಗೂ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಲಬುರಗಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಖಾನೆ ಸಮಸ್ಯೆಯ ಬಗ್ಗೆ ಅವರ ಗಮನಕ್ಕೂ ತರುವುದಾಗಿ ಹೇಳಿದರು.
ಕಾರ್ಖಾನೆಯ ಸ್ಥಾಪನೆ ಕುರಿತು ಮಾತನಾಡಿದ ಶಾಸಕ ಸಿದ್ಧು ಪಾಟೀಲ್, ಭೀಮಣ್ಣ ಖಂಡ್ರೆ ಹಾಗೂ ಗುರುಬಸಪ್ಪ ಖೇಣಿ ಹೆಸರುಗಳನ್ನು ಉಲ್ಲೇಖಿಸಿ, ಕಾರ್ಖಾನೆಯನ್ನು ಮಾರಾಟ ಮಾಡುವ ಯಾವುದೇ ಪ್ರಯತ್ನಕ್ಕೆ ವಿರೋಧ ವ್ಯಕ್ತಪಡಿಸಿದರು.
ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ ಮಾತನಾಡಿ, ಕಾರ್ಖಾನೆಯನ್ನು ಲೀಸ್‌ಗೆ ನೀಡದಿದ್ದರೆ ಡಿಸಿಸಿ ಬ್ಯಾಂಕ್ ಆಡಳಿತದ ವಿರುದ್ಧವೂ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಾದಯಾತ್ರೆಯಲ್ಲಿ ಶಾಸಕ ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯ ಎಂ.ಜಿ. ಮೂಳೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್, ಈಶ್ವರ್ ಸಿಂಗ್ ಠಾಕೂರ್ ಸೇರಿದಂತೆ ಅನೇಕ ಮುಖಂಡರು ಹಾಗೂ ರೈತರು ಭಾಗವಹಿಸಿದ್ದರು.
ಬೆಂಬಲ ವಾಪಸ್ ಪಡೆದ ಆಮ್ ಆದ್ಮಿ ಪಕ್ಷ :
ಕೆಲವು ದಿನಗಳ ಹಿಂದೆ ಈ ಪಾದಯಾತ್ರೆ ಪಕ್ಷಾತೀತ ಹೋರಾಟವಾಗಿರುತ್ತದೆ ಎಂದು ಶಾಸಕ ಡಾ. ಸಿದ್ಧು ಪಾಟೀಲ್ ಘೋಷಿಸಿದ್ದರು. ಇದಕ್ಕೆ ಬೆಂಬಲ ಸೂಚಿಸಿದ್ದ ಆಮ್ ಆದ್ಮಿ ಪಕ್ಷದ ಮುಖಂಡ ಬ್ಯಾಂಕ್ ರೆಡ್ಡಿ ಹಾಗೂ ಜನರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಅಂಕುಶ್ ಗೋಖಲೆ ಹೋರಾಟದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದರು. ಆದರೆ ಪಾದಯಾತ್ರೆಯಲ್ಲಿ ಬಿಜೆಪಿ ಧ್ವಜಗಳು ಪ್ರಮುಖವಾಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇದು ಪಕ್ಷಾತೀತ ಹೋರಾಟವಲ್ಲ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷ ತನ್ನ ಬೆಂಬಲವನ್ನು ವಾಪಸ್ ಪಡೆದುಕೊಂಡಿತು.
ಪಕ್ಷಾತೀತ ಹೋರಾಟ ಎಂದು ಹೇಳಿ ನಂತರ ಬಿಜೆಪಿ ಧ್ವಜಗಳನ್ನು ಮುನ್ನೆಲೆಗೆ ತಂದಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಈ ಹೋರಾಟದಿಂದ ದೂರ ಉಳಿದಿದ್ದೇವೆ. ಮುಂದಿನ ದಿನಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ ನಮ್ಮ ನಿಲುವು ತಿಳಿಸುತ್ತೇವೆ.
-ಬ್ಯಾಂಕ್ ರೆಡ್ಡಿ, ಆಮ್ ಆದ್ಮಿ ಪಕ್ಷದ ಮುಖಂಡ






