ಹುಮನಾಬಾದ್ | ಅತಿ ವೇಗದ ಚಾಲನೆಯಿಂದ ಎಮ್ಮೆ ಬಲಿ ಪ್ರಕರಣ: ಟ್ರಾವೆಲ್ಸ್ ಚಾಲಕನಿಗೆ ಒಂದು ವರ್ಷ ಜೈಲು, 11 ಸಾವಿರ ರೂ. ದಂಡ

ಸಾಂದರ್ಭಿಕ ಚಿತ್ರ
ಹುಮನಾಬಾದ್: ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಎಮ್ಮೆಗೆ ಢಿಕ್ಕಿ ಹೊಡೆದು ಅದರ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಟ್ರಾವೆಲ್ಸ್ ಬಸ್ ಚಾಲಕನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 11 ಸಾವಿರ ರೂ. ದಂಡ ವಿಧಿಸಿ ಹುಮನಾಬಾದ್ನ ಪ್ರಧಾನ ಜೆಎಂಎಫ್ಸಿ ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಧೀಶೆ ಗಾಯತ್ರಿ ಅವರು ಈ ಆದೇಶ ಹೊರಡಿಸಿದ್ದಾರೆ.
2023ರ ಸೆಪ್ಟೆಂಬರ್ 6ರಂದು ಹಳ್ಳಿಖೇಡ (ಬಿ) ಪಟ್ಟಣದ ಸೀಮಿ ನಾಗಣ್ಣಾ ಕ್ರಾಸ್ ಬಳಿ ಈ ಘಟನೆ ನಡೆದಿತ್ತು. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ನಿವಾಸಿ, ಖಾಸಗಿ ಟ್ರಾವೆಲ್ಸ್ ಚಾಲಕ ಜಮೀರ್ ಅಹ್ಮದ್ ಅಂಗಡಿ (49) ಎಂಬಾತ ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿಕೊಂಡು ಬಂದು ಹಳ್ಳಿಖೇಡ (ಬಿ) ಗ್ರಾಮದ ಕಾಶಿನಾಥ ಅವರಿಗೆ ಸೇರಿದ ಎರಡು ಎಮ್ಮೆಗಳಿಗೆ ಢಿಕ್ಕಿ ಹೊಡೆದಿದ್ದನು. ಘಟನೆಯಲ್ಲಿ ಒಂದು ಎಮ್ಮೆ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಂದು ಎಮ್ಮೆಗೆ ಗಾಯವಾಗಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಹಳ್ಳಿಖೇಡ (ಬಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ಕೈಗೊಂಡು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 11 ಸಾವಿರ ರೂ. ದಂಡ ವಿಧಿಸಿದೆ. ದಂಡದ ಮೊತ್ತದಲ್ಲಿ 10 ಸಾವಿರ ರೂ.ಗಳನ್ನು ಎಮ್ಮೆ ಕಳೆದುಕೊಂಡ ಕಾಶಿನಾಥ ಅವರಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದೆ.




