ಹುಮನಾಬಾದ್ | ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸದಿದ್ದರೆ ಅ. 15ರಿಂದ ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆ: ರೈತ ಮುಖಂಡರ ಎಚ್ಚರಿಕೆ

ಹುಮನಾಬಾದ್: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸತತವಾಗಿ ಮನವಿ ಸಲ್ಲಿಸಿದರೂ ಕಬ್ಬು ಬೆಳೆಗಾರರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿರುವ ಜಿಲ್ಲೆಯ ರೈತ ಮುಖಂಡರು, ಸರ್ಕಾರಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸದಿದ್ದರೆ ಅಕ್ಟೋಬರ್ 15ರಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡರು, ಹುಬ್ಬಳ್ಳಿಯಲ್ಲಿ ಲಕ್ಷಾಂತರ ರೈತರು ಸೇರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಬಳಿಕವೂ, ದೆಹಲಿಯಲ್ಲಿ ನಡೆದ ಸಭೆಯಲ್ಲಿ ಪ್ರಮುಖ ಬೇಡಿಕೆಗಳು ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ 9ರಿಂದ 10 ವರ್ಷಗಳಿಂದ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಹೆಚ್ಚಿಸದೆ ಕಬ್ಬು ಬೆಳೆಗಾರರಿಗೆ ನಿರಂತರವಾಗಿ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಕೃಷಿ ವೆಚ್ಚ ವಿಪರೀತವಾಗಿ ಹೆಚ್ಚಾಗಿದೆ. ಹಿಂದೆ 300ರಿಂದ 400 ರೂ. ಇದ್ದ ಡಿಎಪಿ ಗೊಬ್ಬರದ ಬೆಲೆ ಈಗ 2,000ರಿಂದ 2,400 ರೂ.ಗೆ ತಲುಪಿದೆ. ಪೆಟ್ರೋಲ್, ಡೀಸೆಲ್, ಕಳೆನಾಶಕ ಹಾಗೂ ಕ್ರಿಮಿನಾಶಕ ಔಷಧಗಳ ಬೆಲೆ ನಾಲ್ಕು ಪಟ್ಟು ಹೆಚ್ಚಾಗಿದೆ. ಕಬ್ಬು ಕಟ್ಟಲು 5 ಸಾವಿರ ರೂ. ಹಾಗೂ ಲೇಬಲಿಂಗ್ಗೆ 16 ಸಾವಿರದಿಂದ 18 ಸಾವಿರ ರೂ.ವರೆಗೆ ವೆಚ್ಚವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಬ್ಬಿನ ಖರೀದಿ ದರವನ್ನು ಹೆಚ್ಚಿಸಲೇಬೇಕು ಎಂದು ಆಗ್ರಹಿಸಿದರು.
ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಿ, ಕಬ್ಬಿಗೆ ಕನಿಷ್ಠ 5 ಸಾವಿರದಿಂದ 5,500 ರೂ.ವರೆಗೆ ಬೆಲೆ ನಿಗದಿಪಡಿಸಬೇಕು. ಬರಗಾಲದ ಹಿನ್ನೆಲೆಯಲ್ಲಿ ಪ್ರತಿ ಟನ್ ಕಬ್ಬಿಗೆ 1 ಸಾವಿರ ರೂ. ಪ್ರೋತ್ಸಾಹಧನ ನೀಡಬೇಕು. ಒಂದು ಕೆಜಿ ಸಕ್ಕರೆಯ ಬೆಲೆಯನ್ನು 60 ರೂ.ಗೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಬಡವರಿಗೆ ಪಡಿತರ ಅಂಗಡಿಗಳ ಮೂಲಕ ಉಚಿತವಾಗಿ ಅಥವಾ ಕಡಿಮೆ ದರದಲ್ಲಿ ಸಕ್ಕರೆ ನೀಡುವುದಕ್ಕೆ ತಮ್ಮ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದ ರೈತ ಮುಖಂಡರು, ಚಾಕಲೇಟ್, ಕೋಕಾ-ಕೋಲಾ ಸೇರಿದಂತೆ ವಿವಿಧ ವಾಣಿಜ್ಯ ಕಂಪನಿಗಳು 40 ರೂ. ಬೆಲೆಯ ಸಕ್ಕರೆಯನ್ನು ಬಳಸಿ 800 ರೂ.ಗೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ ಎಂದು ಹೇಳಿದರು. ವಾಣಿಜ್ಯ ಬಳಕೆಯ ಸಕ್ಕರೆಯ ಬೆಲೆಯನ್ನು ಹೆಚ್ಚಿಸಿ, ಅದರಿಂದ ದೊರೆಯುವ ಲಾಭವನ್ನು ರೈತರಿಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
ಈ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಅಕ್ಟೋಬರ್ 15ರಂದು ಕಲಬುರಗಿ ರಿಂಗ್ರೋಡ್ನ ಆರ್ಟಿಒ ಹಳೆಯ ಚೆಕ್ಪೋಸ್ಟ್ ಬಳಿ ಹೈದರಾಬಾದ್–ಮುಂಬೈ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಲಾಗುವುದು. ಸಾವಿರಾರು ರೈತರು ಸ್ಥಳದಲ್ಲೇ ಊಟ ಹಾಗೂ ವಸತಿ ವ್ಯವಸ್ಥೆ ಮಾಡಿಕೊಂಡು ಅನಿರ್ದಿಷ್ಟಾವಧಿ ಹೋರಾಟ ನಡೆಸಲಿದ್ದಾರೆ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಸ್ವಾಮಿ, ಗುಂಡು ರೆಡ್ಡಿ ಸೇರಿದಂತೆ ರೈತ ಸಂಘದ ಸದಸ್ಯರು ಹಾಗೂ ವಿವಿಧ ರೈತ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.






