ಹುಮನಾಬಾದ್ | ಶಾಸಕ ಡಾ.ಸಿದ್ದು ಪಾಟೀಲ್ ಅವರ ವರ್ತನೆ ಸರಿಯಲ್ಲ : ಕೆಡಿಪಿ ಸದಸ್ಯ ಸಯ್ಯದ್ ಯಾಸೀನ್ ಅಲಿ

ಹುಮನಾಬಾದ್: ಜನರ ಪ್ರಶ್ನೆಗಳಿಗೆ ಉತ್ತರಿಸುವುದು ಶಾಸಕರ ಕರ್ತವ್ಯವಾಗಿದೆಯೇ ಹೊರತು ಬೆದರಿಕೆ ಹಾಕುವುದು ಅಥವಾ ಅಸಭ್ಯ ಭಾಷೆ ಬಳಸುವುದು ಅವರ ಜವಾಬ್ದಾರಿಯಲ್ಲ ಎಂದು ಕೆಡಿಪಿ ಸದಸ್ಯ ಸಯ್ಯದ್ ಯಾಸೀನ್ ಅಲಿ ಅವರು ಶಾಸಕ ಡಾ. ಸಿದ್ದು ಪಾಟೀಲ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಅವರು, ಹುಮನಾಬಾದ್ ಶಾಸಕ ಡಾ. ಸಿದ್ದು ಪಾಟೀಲ್ ಅವರ ಸಾರ್ವಜನಿಕ ಭಾಷೆ ಮತ್ತು ವರ್ತನೆ ಒಬ್ಬ ಜನಪ್ರತಿನಿಧಿಗೆ ತಕ್ಕದ್ದಲ್ಲ. ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೆ ಬಂದಿರುವ ಶಾಸಕರು ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಜನರನ್ನು ಹೆದರಿಸುವುದು, ಧಮ್ಕಿ ಹಾಕುವುದು ಅಥವಾ ಅವರ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಮಂಗಳವಾರ ಹುಮನಾಬಾದ್ ಹಾಗೂ ಚಿಟಗುಪ್ಪ ತಾಲೂಕುಗಳಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದಡಿ ಕೋಟ್ಯಂತರ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮ ನಡೆದಿತ್ತು. ಸರ್ಕಾರದ ಕೆಡಿಪಿ ಸದಸ್ಯನಾಗಿ ತಾನೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಎಂದು ಯಾಸೀನ್ ಅಲಿ ತಿಳಿಸಿದ್ದಾರೆ.
ಚಿಟಗುಪ್ಪದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ್ ಪಾಟೀಲ್ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಶಾಸಕ ಸಿದ್ದು ಪಾಟೀಲ್ ಪದೇಪದೇ ಮಧ್ಯಪ್ರವೇಶಿಸಿ ಮಾತನಾಡಲು ಅಡ್ಡಿಪಡಿಸುತ್ತಿದ್ದರು. ಆಗ “ಸಾಹೇಬರೆ, ಸ್ವಲ್ಪ ನಿಲ್ಲಿ. ಮಧ್ಯದಲ್ಲಿ ಡಿಸ್ಟರ್ಬ್ ಮಾಡಬೇಡಿ. ವಿಷಯ ಬೇರೆಡೆಗೆ ತಿರುಗುತ್ತದೆ. ನೀವು ನಂತರ ಮಾತನಾಡಿ” ಎಂದು ಮಾತ್ರ ಹೇಳಿದ್ದೇನೆ ಎಂದು ಯಾಸೀನ್ ಅಲಿ ವಿವರಿಸಿದ್ದಾರೆ.
ತಮ್ಮ ಮಾತಿಗೆ ಪ್ರತಿಕ್ರಿಯೆಯಾಗಿ ಶಾಸಕ ಸಿದ್ದು ಪಾಟೀಲ್ ಏಕವಚನದಲ್ಲಿ ಅಸಭ್ಯ ಹಾಗೂ ಆಕ್ಷೇಪಾರ್ಹ ಭಾಷೆ ಬಳಸಿದರು ಎಂದು ಯಾಸೀನ್ ಅಲಿ ಆರೋಪಿಸಿದ್ದಾರೆ.
“ಒಬ್ಬ ಜನಪ್ರತಿನಿಧಿಯಿಂದ ಇಂತಹ ವರ್ತನೆ ನಿರೀಕ್ಷಿಸಲು ಸಾಧ್ಯವಿಲ್ಲ. ಜನರ ಮುಂದೆ ಹಾಗೂ ಮಾಧ್ಯಮಗಳ ಸಮ್ಮುಖದಲ್ಲಿ ಈ ರೀತಿಯ ನಡೆ ಅನುಚಿತವಾಗಿದೆ. ಶಾಸಕರ ಈ ವರ್ತನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ” ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






