ಹುಮನಾಬಾದ್ | ಭಗತ್ ಸಿಂಗ್ ಜನ್ಮದಿನ ಅಂಗವಾಗಿ ಶಾಲಾ ಮಕ್ಕಳಿಂದ ಮೆರವಣಿಗೆ

ಹುಮನಾಬಾದ್: ಹುತಾತ್ಮ ಭಗತ್ ಸಿಂಗ್ ಅವರ ಜನ್ಮದಿನದ ಅಂಗವಾಗಿ ಗೋಖಲೆ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಗತ್ ಸಿಂಗ್ ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ದೇಶಭಕ್ತಿ ಮೆರವಣಿಗೆ ನಡೆಸಿದರು.
ಡೊಳ್ಳು ಹಾಗೂ ಧ್ವನಿವರ್ಧಕಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು “ಭಗತ್ ಸಿಂಗ್ ಅಮರರಾಗಲಿ”, “ಭಾರತ್ ಮಾತಾ ಕೀ ಜೈ” ಸೇರಿದಂತೆ ವಿವಿಧ ದೇಶಭಕ್ತಿ ಘೋಷಣೆಗಳನ್ನು ಕೂಗಿ ರಾಷ್ಟ್ರಪ್ರೇಮದ ಸಂದೇಶ ಸಾರಿದರು. ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗೋಖಲೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಂಕಶ್ ಗೋಖಲೆ, ಕಳೆದ 23 ವರ್ಷಗಳಿಂದ ಸಂಸ್ಥೆಯಲ್ಲಿ ನಿರಂತರವಾಗಿ ಭಗತ್ ಸಿಂಗ್ ಅವರ ಜನ್ಮದಿನವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ಕ್ರಾಂತಿಕಾರಿಯ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೊಂಡ ಸಮಾಜದ ಮುಖಂಡ ಶಿವರಾಜ್ ಚಿನ್ಕೇರಿ, ಜಮಿಲ್ ಖಾನ್, ಶಿವಕುಮಾರ್ ಜಾಧವ, ಶಾಲೆಯ ಮುಖ್ಯಗುರುಗಳು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.






