ಹುಮನಾಬಾದ್ | ನಿರಗುಡಿ ಗ್ರಾಮಕ್ಕೆ ರಸ್ತೆ ಕಲ್ಪಿಸಲು ಆಗ್ರಹಿಸಿ ವಿನೂತನ ಪ್ರತಿಭಟನೆ; ವಿಡಿಯೋ ವೈರಲ್

ಹುಮನಾಬಾದ್: ಬಸವಕಲ್ಯಾಣ ತಾಲೂಕಿನ ನಿರಗುಡಿ ಗ್ರಾಮದ ರಸ್ತೆ ಹಾಳಾಗಿರುವುದನ್ನು ಖಂಡಿಸಿ ಹಾಗೂ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮದ ಯುವಕರು ಬಿಜೆಪಿ ಶಾಸಕ ಡಾ. ಸಿದ್ದು ಪಾಟೀಲ್ ವಿರುದ್ಧ ಸೋಮವಾರ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಸ್ತೆ ಹಾಳಾಗಿ ಹಲವು ದಿನಗಳಾಗಿದ್ದರೂ ಯಾವುದೇ ದುರಸ್ತಿ ಕಾಮಗಾರಿ ಕೈಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಯುವಕರು, ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿ ಶಾಸಕರ ಗಮನ ಸೆಳೆಯುವ ಪ್ರಯತ್ನ ಮಾಡಿದರು.
“ಬಹಳ ದಿನಗಳಿಂದ ನಮ್ಮ ಗ್ರಾಮದ ರಸ್ತೆ ಸಂಪೂರ್ಣ ಹಾಳಾಗಿದೆ. ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ನಮ್ಮ ಗ್ರಾಮದ ಸಮಸ್ಯೆಯತ್ತ ಗಮನ ಹರಿಸಿ ರಸ್ತೆ ನಿರ್ಮಾಣ ಮಾಡಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಿರಗುಡಿ ರಸ್ತೆಯಲ್ಲಿ ಗುಂಡಿಗಳಿಂದಾಗಿ ಪದೇಪದೇ ಅಪಘಾತಗಳು ಸಂಭವಿಸುತ್ತಿದ್ದು, ವಾಹನ ಸವಾರರು ಹಾಗೂ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಜನರ ಸುರಕ್ಷತೆಯ ದೃಷ್ಟಿಯಿಂದ ರಸ್ತೆಯನ್ನು ಆದಷ್ಟು ಬೇಗ ದುರಸ್ತಿಗೊಳಿಸಬೇಕು ಎಂದು ಯುವಕರು ಒತ್ತಾಯಿಸಿದರು.






