ಹುಮನಾಬಾದ್ | ಮಳೆ ಕೊರತೆ : ಹಾನಿಗೊಳಗಾದ ಬೆಳೆಗಳ ವೀಕ್ಷಣೆ ನಡೆಸಿದ ಶಾಸಕ ಸಿದ್ದು ಪಾಟೀಲ್

ಹುಮನಾಬಾದ್: ಮಳೆ ಕೊರತೆಯಿಂದ ಹಾನಿಗೊಳಗಾದ ಬೆಳೆಗಳ ವಸ್ತುಸ್ಥಿತಿ ಪರಿಶೀಲಿಸಲು ಶಾಸಕ ಸಿದ್ದು ಪಾಟೀಲ್ ಅವರು ರವಿವಾರ ಕ್ಷೇತ್ರದ ಮುಗನೂರ್ ಹಾಗೂ ನಮದಾಪುರ್ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಹೆಸರು, ಉದ್ದು, ತೊಗರಿ ಹಾಗೂ ಸೋಯಾ ಬೆಳೆಗಳನ್ನು ವೀಕ್ಷಿಸಿದರು.
ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರೈತರೊಂದಿಗೆ ಕೆಲಕಾಲ ಸಂವಾದ ನಡೆಸಿದ ಶಾಸಕ ಸಿದ್ದು ಪಾಟೀಲ್, ರೈತರ ಸಂಕಷ್ಟಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಜಗದೀಶ್ ಚೌರ್, ಕೃಷಿ ಸಹಾಯಕ ನಿರ್ದೇಶಕ ಶರಣು, ತೋಟಗಾರಿಕೆ ಸಹಾಯಕ ಪ್ರಭಾರಿ ನಿರ್ದೇಶಕ ಜಸ್ಟೀನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಬಿಜೆಪಿ ಮುಖಂಡರಾದ ಬಸವರಾಜ್ ಆರ್ಯ, ಮಲ್ಲಿಕಾರ್ಜುನ್ ಸಿಗಿ, ಗೋಪಾಲಕೃಷ್ಣ ಮೋಹಳೆ, ಶಿವರಾಜ್ ರಾಜೊಳೆ, ವಿನಾಯಕ್ ಮಂಕೋಜಿ, ಅರುಣಕುಮಾರ್ ಮಾಶೆಟ್ಟಿ, ಪ್ರಕಾಶ್ ಮುಗನೂರ್, ನಾಗೇಶ್ ಮದಕಟ್ಟಿ, ವಿದ್ಯಾಸಾಗರ್ ಡಾಕುಳಗಿ ಹಾಗೂ ಪ್ರಕಾಶ್ ಮಾಶೆಟ್ಟಿ ಇದ್ದರು.
ಕಾಂಗ್ರೆಸ್‌ನಿಂದ ಲೇವಡಿ :
ಶಾಸಕರ ಬೆಳೆ ವೀಕ್ಷಣೆ ಕುರಿತು ಕ್ಷೇತ್ರದ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮೂಲಕ ಟೀಕೆ ವ್ಯಕ್ತಪಡಿಸಿದೆ. ಈಗಾಗಲೇ ಬೆಳೆ ಹಾನಿ ಕುರಿತು ಸಮೀಕ್ಷೆ ಪೂರ್ಣಗೊಂಡು ವರದಿ ಸಿದ್ಧವಾಗಿರುವಾಗ ಶಾಸಕರಿಂದ ಮತ್ತೆ ವೀಕ್ಷಣೆ ನಡೆಸುವ ಅಗತ್ಯವೇನು ಎಂದು ಪ್ರಶ್ನಿಸಿದೆ. ಇದು ರೈತರಿಗೆ ಸಾಂತ್ವನ ಹೇಳುವ ಪ್ರಾಮಾಣಿಕ ಪ್ರಯತ್ನವೇ ಅಥವಾ ವೈಫಲ್ಯವನ್ನು ಮುಚ್ಚಿಹಾಕಲು ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಈ ಸಂಬಂಧ ಕೃಷಿ ಜಂಟಿ ನಿರ್ದೇಶಕರು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಬರ ಪ್ರದೇಶಗಳ ವರದಿಯ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.






