ಹುಮನಾಬಾದ್ | ತ್ಯಾಜ್ಯ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿ ಸಿಂಧನಕೇರಾ ಗ್ರಾಮಸ್ಥರ ಧರಣಿ

ಹುಮನಾಬಾದ್: ನಗರದ ಕಸವನ್ನು ಸಿಂಧನಕೇರಾ ಗ್ರಾಮಕ್ಕೆ ತಂದು ಸುರಿಯುವುದನ್ನು ವಿರೋಧಿಸಿ ಹಾಗೂ ತ್ಯಾಜ್ಯ ವಿಲೇವಾರಿ ಘಟಕವನ್ನು ತಕ್ಷಣ ಸ್ಥಳಾಂತರಿಸುವಂತೆ ಆಗ್ರಹಿಸಿ ಸಿಂಧನಕೇರಾ ಗ್ರಾಮಸ್ಥರು ಬುಧವಾರ ನಗರಸಭೆ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
‘ಸಿಂಧನಕೇರಾ ಉಳಿಸಿ, ಪರಿಸರ ರಕ್ಷಿಸಿ’, ‘ಹುಮನಾಬಾದ್ ನಗರದ ಕಸ ಸಿಂಧನಕೇರಾ ಗ್ರಾಮಕ್ಕೆ ಬೇಡ’ ಎಂಬ ಘೋಷಣೆಗಳೊಂದಿಗೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ನ್ಯಾಯ ಸಿಗುವವರೆಗೂ ಧರಣಿ ಮುಂದುವರಿಸುವುದಾಗಿ ಎಚ್ಚರಿಸಿದರು.
ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಧರಣಿ ಆರಂಭಿಸಿದ ಪ್ರತಿಭಟನಾಕಾರರು, ತ್ಯಾಜ್ಯ ವಿಲೇವಾರಿ ಘಟಕದಿಂದ ದುರ್ವಾಸನೆ ಹರಡುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಪರಿಶೀಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳು ಬಂದು ಪರಿಶೀಲನೆ ನಡೆಸುವವರೆಗೆ ನಗರಸಭೆಯ ಕಸವನ್ನು ಸಿಂಧನಕೇರಾ ಗ್ರಾಮದಲ್ಲಿ ಸುರಿಯುವುದಿಲ್ಲ ಎಂದು ಭರವಸೆ ನೀಡಿದರು. ಸಹಾಯಕ ಆಯುಕ್ತರ ಭರವಸೆಯ ಬಳಿಕ ಗ್ರಾಮಸ್ಥರು ಧರಣಿ ಹಿಂಪಡೆದರು.
ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು. ಬಳಿಕ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರು.
ಧರಣಿ ಸತ್ಯಾಗ್ರಹದಲ್ಲಿ ಭೀಮರೆಡ್ಡಿ ಸಿಂಧನಕೇರಾ, ಶೇಕ್ ಮಕ್ಸುದ್, ಅನಿಲ್ ದೊಡ್ಡಿ, ಯುವರಾಜ್ ಐಹೊಳೆ, ಶೇಕ್ ಫಿರ್ದೋಸ್, ಗುರು ಪಾಟೀಲ್, ಅರವಿಂದ್ ಜೋಗಿರೆ, ಶಂಕರ್ ಹಾಗೂ ಮಲ್ಲಿಕಾರ್ಜುನ್ ಇಟಗೆನೋರ್ ಸೇರಿದಂತೆ ಗ್ರಾಮಸ್ಥರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.






