Humnabad | ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಿ : ಅಧಿಕಾರಿಗಳಿಗೆ ಶಾಸಕ ಸಿದ್ದು ಪಾಟೀಲ್ ಸೂಚನೆ

ಹುಮನಾಬಾದ್: ತಾಲೂಕಿನಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ತಕ್ಷಣ ಕ್ರಮವಹಿಸಬೇಕು ಎಂದು ಶಾಸಕ ಸಿದ್ದು ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕರ ಆಡಳಿತ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮುಂದಿನ ಎರಡು ತಿಂಗಳಲ್ಲಿ ಉಂಟಾಗಬಹುದಾದ ಕುಡಿಯುವ ನೀರಿನ ಸಮಸ್ಯೆ ಹಾಗೂ ಸಾರ್ವಜನಿಕರ ವಿವಿಧ ತೊಂದರೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಹಲವು ನಿರ್ದೇಶನಗಳನ್ನು ನೀಡಿದರು.
ಗ್ರಾಮೀಣ ಮಟ್ಟದಲ್ಲಿ ಪಂಪ್ ಆಪರೇಟರ್ ಕೊರತೆಯಿಂದ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ ಎಂಬ ದೂರುಗಳು ಬಂದಿವೆ. ಅಗತ್ಯ ಸಿಬ್ಬಂದಿ ನೇಮಕಾತಿಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ತಕ್ಷಣ ಪ್ರಸ್ತಾವನೆ ಕಳುಹಿಸಬೇಕು ಎಂದು ಸೂಚಿಸಿದರು.
ಈ ಸಾಲಿನಲ್ಲಿ ಕ್ಷೇತ್ರದ ಹಲವು ಗ್ರಾಮಗಳಲ್ಲಿ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಬಾಡಿಗೆ ಬೋರ್‌ವೆಲ್, ಟ್ಯಾಂಕರ್ ಮೂಲಕ ನೀರು ಸರಬರಾಜು ಸೇರಿದಂತೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು. ಆರ್‌ಒ ಪ್ಲಾಂಟ್‌ಗಳ ದುರಸ್ತಿ ಅಗತ್ಯವಿದ್ದರೆ ತಕ್ಷಣ ರಿಪೇರಿ ಮಾಡಿಸಿ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು ಎಂದರು.
ರಾಜ್ಯದಲ್ಲೇ ನಮ್ಮ ಕ್ಷೇತ್ರಕ್ಕೆ ಮಾತ್ರ ಜೆಜೆಎಂ ಕಾಮಗಾರಿಗೆ ಅನುದಾನ ನೀಡಲಾಗಿದೆ. ಆದರೆ ಅಧಿಕಾರಿಗಳು ಗುತ್ತಿಗೆದಾರರ ಮೇಲೆ ಒತ್ತಡ ತಂದು ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ. ಇದರಿಂದ ವಿಳಂಬವಾಗುತ್ತಿದೆ. ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.
ಕುಡಿಯುವ ನೀರಿನ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಇರುವ ಕಡೆಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗದಂತೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಘನತ್ಯಾಜ್ಯ ನಿರ್ವಹಣೆಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತರಿಸುವುದು ನನ್ನ ಜವಾಬ್ದಾರಿ. ಆದರೆ ಅಧಿಕಾರಿಗಳು ವೈಜ್ಞಾನಿಕ ವಿಲೇವಾರಿ ಯೋಜನೆ ರೂಪಿಸಿ ತಕ್ಷಣ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಜನತೆಗೆ ಸರಿಯಾದ ಸಮಯದಲ್ಲಿ ಸಿಗದೆ ಕಚೇರಿಗೆ ಸುತ್ತಾಡಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಿದ್ದು ಪಾಟೀಲ್ ಎಚ್ಚರಿಕೆ ನೀಡಿದರು.






