'ಮೊಂಥಾ' ಚಂಡಮಾರುತದ ಪ್ರಭಾವ: ಬೀದರ್ ಜಿಲ್ಲೆಯಲ್ಲಿ ಧಾರಾಕಾರ ಮಳೆ

ಬೀದರ್: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ 'ಮೊಂಥಾ' ಚಂಡಮಾರುತದ ಪ್ರಭಾವದಿಂದ ಬೀದರ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದೆ.
'ಮೊಂಥಾ' ಚಂಡಮಾರುತವು ಆಂಧ್ರ ಪ್ರದೇಶ ಮತ್ತು ಒಡಿಶಾ ರಾಜ್ಯಗಳ ಮೇಲೆ ಹೆಚ್ಚು ಪರಿಣಾಮ ಬಿರುತ್ತಿದೆ. ಬೀದರ್ ಜಿಲ್ಲೆಯು ತೆಲಂಗಾಣ ರಾಜ್ಯದ ಗಡಿ ಜಿಲ್ಲೆಯಾಗಿದ್ದು, ಚಂಡಮಾರುತ ಜಿಲ್ಲೆಯಲ್ಲೂ ಹವಾಮಾನ ಬದಲಾವಣೆಗೆ ಕಾರಣವಾಗಿದೆ.
ಮಂಗಳವಾರ ಇಡೀ ದಿನ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಮಳೆ ಸುರಿಯುತಿತ್ತು. ಜಿಲ್ಲಾದ್ಯಂತ ಕಳೆದ ರಾತ್ರಿಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಬುಧವಾರ ಬೆಳಗ್ಗೆಯೂ ಮುಂದುವರಿದಿದೆ.
ಮಳೆಯಿಂದಾಗಿ ಜಿಲ್ಲೆಯಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಮುಂಗಾರು ಮಳೆಯ ಅಬ್ಬರಕ್ಕೆ ಉದ್ದು, ಹೆಸರು, ತೊಗರಿ, ಸೋಯಾ ಬೆಳೆ ಕಳೆದುಕೊಂಡಿದ್ದ ರೈತರು ಇದೀಗ ಹಿಂಗಾರು ಮಳೆ ಕಾರಣ ಇದೀಗ ಬಿತ್ತಿರುವ ಕಡಲೆ, ಜೋಳ, ಕುಸುಬಿ ಮತ್ತು ಫಸಲಿಗೆ ಬಂದಿರುವ ಹತ್ತಿ ಬೆಳೆಯೂ ನಾಶವಾಗುವ ಬಗ್ಗೆ ಆತಂಕಿತರಾಗಿದ್ದಾರೆ.
ಜಿಲ್ಲೆಯಲ್ಲಿ ಕೆಲ ರೈತರು ಸೋಯಾ ಬೆಳೆಯ ರಾಶಿ ಮಾಡಿದ್ದು, ಬಹುತೇಕ ರೈತರು ಸೋಯಾ ಬೆಳೆ ಕಟಾವು ಮಾಡಿ ರಾಶಿ ಮಾಡುವುದಕ್ಕಾಗಿ ಬಣವಿ ಹಾಕಿಟ್ಟಿದ್ದಾರೆ. ಈ ಬಣವಿ ಹಾಕಿದ ಸೋಯಾ ಕೂಡ ನಾಶವಾಗುವ ಭಯದಲ್ಲಿ ರೈತರು ಕಂಗಾಲಾಗಿದ್ದಾರೆ.
'ಮೊಂಥಾ' ಚಂಡಮಾರುತದ ಪ್ರಭಾವ ಜಿಲ್ಲಾದ್ಯಂತ ಅ.31ರ ವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.







