ಸಚಿವ ಈಶ್ವರ್ ಖಂಡ್ರೆ ಅವರಿಂದ ಜಿಲ್ಲಾ ಕ್ಷಯ ರೋಗ ಕೇಂದ್ರ ಕಚೇರಿಯ ಉದ್ಘಾಟನೆ

ಬೀದರ್ : ಜಿಲ್ಲಾ ಕ್ಷಯ ರೋಗ ಕೇಂದ್ರ ಕಚೇರಿಯ ನೂತನ ಕಟ್ಟಡವನ್ನು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಉದ್ಘಾಟಿಸಿದರು.
ಇಂದು ನಗರದ ಬ್ರಿಮ್ಸ್ ಆಸ್ಪತ್ರೆ ಆವರಣದಲ್ಲಿ ನಿರ್ಮಾಣವಾದ ಕ್ಷಯ ರೋಗ ಕೇಂದ್ರ ಕಚೇರಿಯ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದ ಅವರು, 2030ರ ಒಳಗಾಗಿ ಕ್ಷಯ ರೋಗ ನಿರ್ಮೂಲನೆಯಾಗಬೇಕು ಎನ್ನುವುದು ವಿಶ್ವ ಸಂಸ್ಥೆಯ ಗುರಿಯಾಗಿದೆ. ಹಾಗಾಗಿ ಆ ರೋಗದ ನಿರ್ಮೂಲನೆಗಾಗಿ ಈ ಕಟ್ಟಡ ಉದ್ಘಾಟನೆ ಮಾಡಲಾಗಿದೆ ಎಂದರು.
ನಮ್ಮ ಜಿಲ್ಲೆಯಲ್ಲಿ ಒಟ್ಟು 2,000 ಜನ ಈ ರೋಗದಿಂದ ಬಳಲುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಅದರ ಸಮೀಕ್ಷೆ ಮಾಡಿ, ರೋಗಿಗಳ ಪತ್ತೆ ಹಚ್ಚಿ ಔಷಧಿ ನೀಡುವುದಕ್ಕಾಗಿ ಇದು ಸಹಕಾರಿಯಾಗುತ್ತದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಮ್ ಖಾನ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಮಾಜಿ ಎಂ ಎಲ್ ಸಿ ಅರವಿಂದಕುಮಾರ್ ಅರಳಿ, ನಗರಸಭೆ ಅಧ್ಯಕ್ಷ ಮೊಹ್ಮದ್ ಗೌಸ್, ಡಿ ಎಚ್ ಒ ಡಾ.ಧ್ಯಾನೇಶ್ವರ್ ನಿರಗುಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.







