ಒಳಮೀಸಲಾತಿಯ ಬಗ್ಗೆ ಸರ್ಕಾರ ಹೆಚ್ಚು ಪ್ರಚಾರ ಮಾಡದಿದ್ದಕ್ಕೆ ಬೇಸರ ಇದೆ: ದತ್ತು ಸೂರ್ಯವಂಶಿ

ಬೀದರ್ : ಒಳಮೀಸಲಾತಿಯ ಬಗ್ಗೆ ಎಷ್ಟು ಬೇಕೋ ಅಷ್ಟು ಪ್ರಚಾರ ಸರ್ಕಾರದ ವತಿಯಿಂದ ಆಗಲಿಲ್ಲ. ಇದರಿಂದಾಗಿ ನಮಗೆ ಬೇಸರ ಇದೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯ ಉಪಾಧ್ಯಕ್ಷ ದತ್ತು ಸೂರ್ಯವಂಶಿ ತಿಳಿಸಿದರು.
ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಳ ಮೀಸಲಾತಿಯ ಸಮೀಕ್ಷೆ ಬಗ್ಗೆ ದಲಿತಪರ ಸಂಘಟನೆ ಹಾಗೂ ಆಯಾ ಜಾತಿಗಳ ಸಂಘಟನೆಗಳಿಂದಲೇ ಹೆಚ್ಚಾಗಿ ಪ್ರಚಾರ ಮಾಡಲಾಗುತ್ತಿದೆಯೇ ವಿನಃ ಸರ್ಕಾರದಿಂದ ಹೆಚ್ಚಾಗಿ ಪ್ರಚಾರ ಮಾಡಲಾಗುತ್ತಿಲ್ಲ. ಇದರಿಂದಾಗಿ ಜನರಿಗೆ ಒಳಮೀಸಲಾತಿ ಬಗ್ಗೆ ಏನು ಕೂಡ ಗೊತ್ತಾಗುತ್ತಿಲ್ಲ. ಜನರು ಗೊಂದಲದಲ್ಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಒಳಮಿಸಲಾತಿಯ ಬಗ್ಗೆ ಸಮೀಕ್ಷೆ ಮಾಡುತ್ತಿರುವುದು ಸಂತಸವಿದೆ. ಆದರೆ ಇದಕ್ಕೆ ಇನ್ನಷ್ಟು ಪ್ರಚಾರ ಬೇಕಿತ್ತು. ನಿಗದಿಪಡಿಸಿದ ಸಮಯದಲ್ಲಿ ಸಂಪೂರ್ಣ ಸಮೀಕ್ಷೆ ಪೂರ್ಣಗೊಳಿಸುವುದು ಕಷ್ಟವಾದ್ದರಿಂದ ಈ ಸಮೀಕ್ಷೆಯ ಕಾಲಾವಧಿ ಸ್ವಲ್ಪ ದಿವಸ ಮುಂದೂಡಬೇಕು ಎಂದರು.
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಜಾರಿಗಾಗಿ ನಿಖರವಾದ ದತ್ತಾಂಶ ಸಂಗ್ರಹಿಸಲು ನ್ಯಾಯಮೂರ್ತಿ ನಾಗಮಹನದಾಸ್ ಆಯೋಗದ ವತಿಯಿಂದ ಮೇ.5 ರಿಂದ 17 ರವರೆಗೆ ಪ್ರತಿ ಮನೆಗೆ ತೆರಳಿ ಸರ್ಕಾರಿ ನೌಕರರು ಜಾತಿ ಗಣತಿ ಪ್ರಾರಂಭಿಸಿದ್ದಾರೆ. ಹಾಗಾಗಿ ಒಳಮೀಸಲಾತಿ ಸೌಲಭ್ಯ ಪಡೆಯಲು ರಾಜ್ಯದ 101 ಪರಿಶಿಷ್ಟ ಜಾತಿಯವರು ತಮ್ಮ ಮೂಲ ಜಾತಿಗಳಾದ ಮಾದಿಗ, ಹೊಲೆಯ, ಸಮಗಾರ, ಡೋಹರ, ಮಚ್ಚಿಗಾರ, ಭೋವಿ, ಲಂಬಾಣಿ, ಕೊರಚ, ಕೊರಮ ಹೀಗೆ ಇತ್ಯಾದಿಯಾಗಿ ತಮ್ಮ ಮೂಲ ಜಾತಿಯ ವಿವರ ಸ್ಪಷ್ಟವಾಗಿ ತಿಳಿಸುವ ಮೂಲಕ ಒಳಮೀಸಲಾತಿ ಸೌಲಭ್ಯ ಪಡೆಯಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕೋಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಸತ್ಯದೀಪ್ ಹಾವನೂರ್, ರಾಜ್ಯ ಕಾರ್ಯದರ್ಶಿ ಜೆ ಆಸ್ಕರ್, ಜಿಲ್ಲಾ ಸಂಯೋಜಕ ಶಾದ್ರಕ್ ವಿ ಸಿತಾಳಗೇರಾ, ಜಿಲ್ಲಾಧ್ಯಕ್ಷ ಯೋಹನ್ ವಿ ಡಿಸೋಜಾ, ಜಿಲ್ಲಾ ಉಪಾಧ್ಯಕ್ಷ ಗುಣವಂತ್ ಶಿಂಧೆ, ಉಮೇಶ್ ಗುತ್ತೇದಾರ್, ಸಾಲೊಮನ್ ಮಿರಾಗಂಜ್ ಹಾಗೂ ವಿಜಯಕುಮಾರ್ ಧಾಗೆ ಇದ್ದರು.







