ಶಾಂತಿ-ಸೌಹಾರ್ದತೆ, ಪರಿಸರ ಸ್ನೇಹಿಯಾಗಿ ಗಣೇಶ ಉತ್ಸವ ಆಚರಿಸೋಣ : ಈಶ್ವರ್ ಖಂಡ್ರೆ

ಬೀದರ್ : ಜಿಲ್ಲೆಯಲ್ಲಿ ಶಾಂತಿ-ಸೌಹಾರ್ದತೆ ಮತ್ತು ಪರಿಸರ ಸ್ನೇಹಿಯಾಗಿ ಗಣೇಶ ಉತ್ಸವ ಆಚರಿಸೋಣ ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಹೇಳಿದರು.
ಮಂಗಳವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗಣೇಶ ಉತ್ಸವ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಬೀದರ್ ಜಿಲ್ಲೆ ಭಾವೈಕ್ಯತೆಗೆ ಹೆಸರಾದ ಜಿಲ್ಲೆಯಾಗಿದೆ. ಇಲ್ಲಿ ಎಲ್ಲಾ ಧರ್ಮದ ಹಬ್ಬಗಳು ವಿಶೇಷವಾಗಿ ಆಚರಿಸಲಾಗುತ್ತದೆ. ಈ ವರ್ಷ ಗಣೇಶ ಉತ್ಸವ ಕೂಡ ಅರ್ಥಪೂರ್ಣವಾಗಿ, ಅದ್ಧೂರಿಯಾಗಿ ಆಚರಿಸೋಣ. ಸಾರ್ವಜನಿಕ ಆರೋಗ್ಯ, ಕಾನೂನು ಸುವ್ಯವಸ್ಥೆ ಮುಂತಾದವು ಗಮನದಲ್ಲಿಟ್ಟುಕೊಂಡು ಯಾವುದೇ ತೊಂದರೆಯಾಗದಂತೆ ಉತ್ಸವ ಆಚರಣೆ ಮಾಡುವುದು ಉತ್ತಮ ಎಂದು ಹೇಳಿದರು.
ಗಣೇಶ್ ವಿಸರ್ಜನೆ ದಿವಸ ಸಮಯ ಪಾಲನೆ ಬಹಳ ಮುಖ್ಯವಾಗಿದೆ. ಮಧ್ಯಾಹ್ನ 3 ಗಂಟೆಗೆ ಆರಂಭಿಸಿ 12 ಗಂಟೆಯೊಳಗೆ ಮುಕ್ತಾಯಗೊಳಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಮಾತನಾಡಿ, ಇತ್ತೀಚಿನ ಹೈಕೋರ್ಟ್ ಆದೇಶದಂತೆ ಡಿಜೆಗಳಿಗೆ ಅನುಮತಿ ಇಲ್ಲ. 2+2 ಸೌಂಡ್ ಬಾಕ್ಸ್ ಮಾತ್ರ ಬಳಸಿ, ಸಮಯ ಪಾಲನೆ ಮಾಡಬೇಕು. ಹಾಗೆಯೇ ಸಾರ್ವಜನಿಕರು ತಮಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ಜಿಲ್ಲಾಡಳಿತ ಯಾವಾಗಲೂ ನಿಮ್ಮ ಜೊತೆಗಿರುತ್ತದೆ. ಮಾರ್ಗಸೂಚಿ ಮತ್ತು ನಿರ್ದೇಶನಗಳನ್ನು ಪಾಲಿಸಿ, ಆದರ್ಶವಾಗಿ ಗಣೇಶ ಉತ್ಸವ ಆಚರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಜ್ ಮತ್ತು ಪೌರಾಡಳಿತ ಸಚಿವ ರಹೀಂ ಖಾನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ, ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಬೀದರ್ ಸಹಾಯಕ ಆಯುಕ್ತ ಮುಹಮ್ಮದ್ ಶಕೀಲ್, ಬಸವಕಲ್ಯಾಣ ಸಹಾಯಕ ಆಯುಕ್ತ ಮುಕುಲ್ ಜೈನ್, ಗಣೇಶ್ ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಗಾದಗಿ, ಕಾರ್ಯಾಧ್ಯಕ್ಷ ಬಾಬು ವಾಲಿ, ನಂದಕುಮಾರ್ ವರ್ಮಾ, ಶಶಿ ಹೊಸಳ್ಳಿ, ದೀಪಕ್ ವಾಲಿ, ರಜಿನಿಶ್ ವಾಲಿ, ಮನೊಹರ್ ದಂಡೆ ಹಾಗೂ ಸೋಮಶೇಖರ್ ಪಾಟೀಲ್ ಸೇರಿದಂತೆ ಗಣೇಶ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.







