ಅ.24 ರಿಂದ ಬಸವಕಲ್ಯಾಣದಲ್ಲಿ ‘ಕಲ್ಯಾಣ ಪರ್ವ’ ರಜತ ಮಹೋತ್ಸವ : ಸಿದ್ಧರಾಮೇಶ್ವರ ಸ್ವಾಮೀಜಿ

ಬೀದರ್ : ವಿಶ್ವಗುರು ಬಸವಣ್ಣನವರ ತತ್ವ–ಸಿದ್ಧಾಂತಗಳು, ವಚನ ಸಾಹಿತ್ಯದ ಸಂದೇಶ ಹಾಗೂ ಶರಣರ ಸಮಾನತೆಯ ಆಶಯಗಳನ್ನು ವಿಶ್ವದೆಲ್ಲೆಡೆ ಪಸರಿಸುವ ಉದ್ದೇಶದಿಂದ ಬಸವ ಧರ್ಮ ಪೀಠ ಹಾಗೂ ಕಲ್ಯಾಣ ಪರ್ವ ಉತ್ಸವ ಸಮಿತಿ ವತಿಯಿಂದ ಅ. 24ರಿಂದ 26ರ ವರೆಗೆ ಬಸವಕಲ್ಯಾಣದಲ್ಲಿ 25ನೇ ವರ್ಷದ ‘ಕಲ್ಯಾಣ ಪರ್ವ’ ರಜತ ಮಹೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ ಎಂದು ಬಸವಕಲ್ಯಾಣದ ಅಲ್ಲಮಪ್ರಭು ಶೂನ್ಯ ಪೀಠದ ಸಿದ್ಧರಾಮೇಶ್ವರ್ ಸ್ವಾಮೀಜಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಸವಕಲ್ಯಾಣದ 108 ಅಡಿ ಎತ್ತರದ ಬಸವಣ್ಣನವರ ಪ್ರತಿಮೆ ಇರುವ ಬಸವ ಮಹಾಮನೆ ಆವರಣದಲ್ಲಿ ಮೂರು ದಿನಗಳ ಕಾಲ ರಾಷ್ಟ್ರಮಟ್ಟದ ಧಾರ್ಮಿಕ, ಸಾಮಾಜಿಕ, ವೈಚಾರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಲಿಂಗೈಕ್ಯ ಡಾ.ಮಾತೆ ಮಹಾದೇವಿ ಅವರ ನೇತೃತ್ವದಲ್ಲಿ 2001ರಲ್ಲಿ ಆರಂಭವಾದ ಕಲ್ಯಾಣ ಪರ್ವವು 24 ವರ್ಷಗಳನ್ನು ಪೂರೈಸಿ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲದೆ ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಿಂದ ಸಾವಿರಾರು ಶರಣರು, ಬಸವಾಭಿಮಾನಿಗಳು ಹಾಗೂ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಕೂಡಲಸಂಗಮದ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಹಾಜಗದ್ಗುರು ಡಾ. ಮಾತೆ ಗಂಗಾದೇವಿ ಅವರ ದಿವ್ಯ ಸಾನ್ನಿಧ್ಯ ವಹಿಸುವರು. ಅ. 24ರಂದು ಬೆಳಿಗ್ಗೆ ಬೆಳಿಗ್ಗೆ 10 ಗಂಟೆಗೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ರಜತ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಧ್ವಜಾರೋಹಣ ನೆರವೇರಿಸಲಿದ್ದು, ಶಾಸಕ ಶರಣು ಸಲಗರ ಗೌರವ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ಬಳಿಕ ಧರ್ಮ ಚಿಂತನಗೋಷ್ಠಿ ನಡೆಯಲಿದೆ ಎಂದು ಅವರು ತಿಳಿಸಿದರು.
ಅ.24ರ ಮಧ್ಯಾಹ್ನ 3:30 ಗಂಟೆಯಿಂದ 5:30 ಗಂಟೆವರೆಗೆ ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಸಮಾವೇಶ ಹಾಗೂ ಸಾಯಂಕಾಲ ‘12ನೇ ಶತಮಾನದ ಅನುಭವ ಮಂಟಪದಲ್ಲಿ ಮಹಿಳೆಯರ ಸ್ಥಾನ’ ವಿಷಯ ಕುರಿತು ಮಹಿಳಾ ಗೋಷ್ಠಿ ನಡೆಯಲಿದೆ. ವಿಧಾನ ಪರಿಷತ್ ಉಪಸಭಾಪತಿ ಉಮಾಶ್ರೀ ಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ. ನೂತನವಾಗಿ ನಿರ್ಮಿಸಿರುವ ಹರಳಯ್ಯ ಸಮುದಾಯ ಭವನವನ್ನು ಮಾಜಿ ಸಚಿವ ಎಚ್. ಆಂಜನೇಯ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸ್ವಾಗತ ಸಮಿತಿಯ ಅಧ್ಯಕ್ಷ ಸೋಮಶೇಖರ್ ಪಾಟೀಲ್ ಗಾದಗಿ ಅವರು ಮಾತನಾಡಿ, ಅ. 26ರಂದು ಬೆಳಿಗ್ಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಶರಣ ಸದ್ಭಾವನಾ ಗೋಷ್ಠಿ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಬಸವಕಲ್ಯಾಣದ ಕೋಟೆ ಆವರಣದಿಂದ ಬೆಳ್ಳಿ ರಥದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಹಾಗೂ ವಚನ ಸಾಹಿತ್ಯದ ಭವ್ಯ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 12:30 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ದಾಸೋಹಿಗಳ ಗೌರವ ಸತ್ಕಾರದೊಂದಿಗೆ ಮೂರು ದಿನಗಳ ಉತ್ಸವ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಜೈರಾಜ್ ಖಂಡ್ರೆ, ರಾಜೇಂದ್ರ ಗಂದಗೆ, ರಾಜೇಂದ್ರ ಜೊನ್ನಿಕೇರಿ, ಚಂದ್ರಶೇಖರ್ ಹೆಬ್ಬಾಳೆ, ಪ್ರಚಾರ ಸಮಿತಿಯ ಅಧ್ಯಕ್ಷ ಶಿವಶರಣಪ್ಪ ಹುಗ್ಗೆ ಪಾಟೀಲ್, ಉತ್ಸವ ಸಮಿತಿಯ ಸಂಜೀವಕುಮಾರ್ ಪಾಟೀಲ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ್ ಸ್ವಾಮಿ, ಬೀದರ್ ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ್ ಖಾಜಾಪುರ್, ರಾಷ್ಟ್ರೀಯ ಬಸವ ದಳದ ರಾಜ್ಯಾಧ್ಯಕ್ಷ ಕೆ. ವೀರೇಶ್ ಹಾಗೂ ಮಾರ್ಗದರ್ಶಕ ಕಂಟೆಪ್ಪ ಗಂದಿಗುಡಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.






