ಬಸವ ಸಂಸ್ಕೃತಿ ಅಭಿಯಾನದ ಕುರಿತು ಹಗುರವಾಗಿ ಮಾತನಾಡಿದ ಕನೇರಿ ಶ್ರೀಗಳನ್ನು ಕೂಡಲೇ ಬಂಧಿಸಬೇಕು : ಕಿರಣ್ ಖಂಡ್ರೆ

ಬೀದರ್ : ಬಸವ ಸಂಸ್ಕೃತಿ ಅಭಿಯಾನ ನಡೆಸಿದ ಪೂಜ್ಯರಿಗೆ ಕಾಡಸಿದ್ದೇಶ್ವರ ಮಠದ ಕನೇರಿ ಶ್ರೀಗಳು ಬಾಯಿಗೆ ಬಂದಂತೆ ಹಗುರವಾಗಿ ಅವಾಚ್ಯ ಶಬ್ದಗಳಿಂದ ಬೈದಿರುವುದು ತೀವ್ರ ಖಂಡನೀಯವಾಗಿದೆ. ಸರ್ಕಾರ ಅವರ ಮೇಲೆ ಕೂಡಲೇ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ರಾಜ್ಯ ಕಾರ್ಯದರ್ಶಿ ಕಿರಣ್ ಖಂಡ್ರೆ ಅವರು ಆಗ್ರಹಿಸಿದರು.
ಬುಧವಾರ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಸವ ಸಂಸ್ಕೃತಿ ಅಭಿಯಾನ ಮುಖ್ಯಮಂತ್ರಿಗಳ ಕೃಪಾಪೋಷಿತ ಕಾರ್ಯಕ್ರಮವಾಗಿದೆ. ಅವರನ್ನು ಮೆಟ್ಟಿನಿಂದ ಹೊಡೆಯಬೇಕು. ಎಂದೆಲ್ಲ ಕೆಟ್ಟ ಭಾಷೆಗಳನ್ನು ಬಳಸಿರುವ ಕನೇರಿ ಶ್ರೀಗಳಿಗೆ ಸರ್ಕಾರ ಕೂಡಲೇ ಬಂಧಿಸಬೇಕು. ನಮ್ಮದು ಸಿಎಂ ಕೃಪಾಪೋಷಿತ ಅಭಿಯಾನ ಅಲ್ಲ. ಅದು ವಿಶ್ವಗುರು ಬಸವೇಶ್ವರರ ಕೃಪಾಪೋಷಿತ, ಲಿಂಗಾನಂದ್ ಸ್ವಾಮಿ ಮತ್ತು ಮಾತೆ ಮಹಾದೇವಿಯವರ ಕೃಪಾಪೋಷಿತ ಅಭಿಯಾನವಾಗಿದೆ ಎಂದು ಅವರು ತಿಳಿಸಿದರು.
ಸ್ವತಃ ನಮ್ಮ ಹಣ ಖರ್ಚು ಮಾಡಿ ನಾವು ಅಭಿಯಾನಗಳಲ್ಲಿ ಪಾಲ್ಗೊಂಡಿದ್ದೇವೆ. ಪೂಜ್ಯ ಗದುಗಿನ ಶ್ರೀಗಳು, ಭಾಲ್ಕಿ ಶ್ರೀಗಳು ಸೇರಿದಂತೆ ಹಲವಾರು ಬಸವ ಭಕ್ತರು, ಪೂಜ್ಯರು ದೇಣಿಗೆ ನೀಡಿದ್ದಾರೆ. ಇದರಲ್ಲಿ ಯಾವುದೇ ರಾಜಕಾರಣಿಗಳ ಹಣ ನಾವು ಬಳಸಿಕೊಂಡಿಲ್ಲ. ಸರ್ಕಾರವೂ ನಮಗೆ ಸಹಾಯ ಮಾಡಿಲ್ಲ. ಕಾರ್ಯಕ್ರಮದ ಬಗ್ಗೆ ಲೆಕ್ಕ ಕೇಳುವ ನಿಮಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ವಿದೇಶಿ ಧರ್ಮಗಳಿಗೆ ನಮ್ಮ ದೇಶದಲ್ಲಿ ಮಾನ್ಯತೆ ಸಿಗುತ್ತದೆ. ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಸಿಖ್ ಧರ್ಮಗಳು ಸ್ವತಂತ್ರ ಧರ್ಮದ ಮಾನ್ಯತೆ ಪಡೆದುಕೊಂಡಿವೆ. ಆದರೆ ಭಾರತದ ನೆಲದಲ್ಲಿಯೇ ಹುಟ್ಟಿಕೊಂಡ ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಬೇಡವಾ ಎಂದು ಪ್ರಶ್ನಿಸಿದ ಅವರು, ಇದೇ ರೀತಿ ಕನೇರಿ ಶ್ರೀಗಳು ಹಗುರವಾಗಿ ಮಾಡನಾಡುತ್ತಿದ್ದರೆ ಎಲ್ಲಾ ಕಡೆ ಅವರ ಮೇಲೆ ಪ್ರಕರಣ ದಾಖಲಿಸುತ್ತೇವೆ. ಧರ್ಮಕ್ಕಾಗಿ ಹಾಗೂ ದೇಶಕ್ಕಾಗಿ ನಿರಂತರವಾಗಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಶ್ರೀಕಾಂತ್ ಭೊರಾಳೆ, ವಿಶ್ವಗುರು ಬಸವ ಧರ್ಮ ಕೇಂದ್ರದ ಅಧ್ಯಕ್ಷ ಓಂಪ್ರಕಾಶ್ ರೊಟ್ಟೆ ಉಪಸ್ಥಿತರಿದ್ದರು.







