ಬೀದರ್ ನ ಮಡಿವಾಳಯ್ಯಾ ಸಾಲಿಗೆ ಸಂಗೀತ ಕ್ಷೇತ್ರದಲ್ಲಿ "ಕನ್ನಡ ರಾಜ್ಯೋತ್ಸವ ಪ್ರಶಸ್ತಿ"

ಮಡಿವಾಳಯ್ಯಾ ಸಾಲಿ
ಬೀದರ್ : ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ 2025-26ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಮಡಿವಾಳಯ್ಯಾ ಸಾಲಿ ಅವರು "ಸಂಗೀತ" ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಡಿವಾಳಯ್ಯಾ ಸಾಲಿ ಅವರು ಶಿವಲಿಂಗಯ್ಯಾ ಮತ್ತು ತೇಜಮ್ಮ ದಂಪತಿಗಳಿಗೆ ಸೆ. 21ರ, 1955 ರಲ್ಲಿ ಹುಮನಾಬಾದ್ ತಾಲೂಕಿನ ಅಲ್ಲೂರು ಗ್ರಾಮದಲ್ಲಿ ಜನಿಸಿದರು. ಗುಲ್ಬರ್ಗದ ಶರಣ ಬಸವೇಶ್ವರ್ ಕಾಲೇಜಿನಲ್ಲಿ ಬಿಎ ಪದವಿ ಪಡೆದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತ್ಯಾಗರ್ತಿ ಗ್ರಾಮ ಪಂಚಾಯತಿಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದಾರೆ.
ಮಡಿವಾಳಯ್ಯಾ ಸಾಲಿ ಅವರು 11ನೇ ವಯಸ್ಸಿನಲ್ಲಿಯೇ ತಮ್ಮ ಸ್ವಂತ ಗ್ರಾಮವಾದ ಅಲ್ಲೂರ್ ಗ್ರಾಮದ ಚಂದ್ರಪ್ಪ ಪಾಂಚಳ ಹಾಗೂ ಸಿದ್ರಾಮಪ್ಪ ಅಲ್ಲೂರ್ ಅವರಿಂದ ಪ್ರಾಥಮಿಕ ತಬಲಾ ಶಿಕ್ಷಣ ಪಡೆದು, ಹೆಚ್ಚಿನ ಶಿಕ್ಷಣವನ್ನು ಭಾರತದಲ್ಲಿ ಖ್ಯಾತಿ ಪಡೆದ ಪಂಡಿತ ಅನೋಖಿಲಾಲ್ ಮಿಶ್ರಾ ಅವರ ಶಿಷ್ಯ ಪಂಡಿತ್ ಕೆ.ಎಸ್ ಹಡಪದ ಅವರ ಹತ್ತಿರ ಪಡೆದಿದ್ದಾರೆ. ಹೈದರಾಬಾದಿನ ಪಂ. ನಂದಕುಮಾರ ಬನಾರಸ್ಸಿನ, ಪಂ. ಮಣಿಲಾಲ್ ಮಿಶ್ರಾ, ಧಾರವಾಡದ ಪಂ. ಬಸವರಾಜ್ ಬೆಂಡಿಗೇರಿ ಅವರಂಥ ಗುರುಗಳಿಂದ ಅಭ್ಯಾಸ ಮತ್ತು ಮಾರ್ಗದರ್ಶನ ಪಡೆದಿದ್ದಾರೆ.
ಇವರ ತಬಲಾ ಕಲೆ ಕಂಡು, ಕಲಬುರಗಿಯ ಸ್ವರ ಮಾಧುರಿ ಸಂಗೀತ ವಿದ್ಯಾಲಯ ಅವರಿಂದ 'ತಬಲಾ ಸಾಧಕ' ಪ್ರಶಸ್ತಿ, ಬೆಂಗಳೂರಿನ ಸಂಗೀತ ನೃತ್ಯ ಅಕಾಡೆಮಿ ಅವರಿಂದ 'ನಮ್ಮ ಸಾಧಕರು' ಪ್ರಶಸ್ತಿ, ಭಾತಂಬ್ರಾ ಸಂಸ್ಥಾನ ಮಠದಿಂದ 'ಬಸವ ಕಲಾ ರತ್ನ' ಪ್ರಶಸ್ತಿ, ಹಾಗೂ ಮೈಸೂರಿನ ಗುರು ಪುಟ್ಟರಾಜ ಸಂಗೀತ ಸಭಾ ಅವರಿಂದ ಪ್ರತಿಷ್ಠಿತ 'ಪಂ.ಕೆ.ಎಸ್. ಹಡಪದ' ಪ್ರಶಸ್ತಿ ನೀಡಿ ಇವರನ್ನು ಗೌರವಿಸಲಾಗಿದೆ.
ಪ್ರಸ್ತುತ ಇವಾಗ ಇವರು ಹುಮನಾಬಾದಲ್ಲಿ ನೆಲೆಸಿದ್ದು, ನಿವೃತ್ತಿ ಜೀವನ ಕಳೆಯುತ್ತಿದ್ದಾರೆ. ಇದರ ಜೊತೆಗೆ ಬೀದರ್ ನಲ್ಲಿ ಇರುವ ಪಂ.ಪಂಚಾಕ್ಷರ ಗವಾಯಿ ಸಂಗೀತ ವಿದ್ಯಾಲಯದಲ್ಲಿ ತಬಲಾ ಅತಿಥಿ ಉಪನ್ಯಾಸಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ತೇಜೆಸ್ವಿನಿ ತಬಲಾ ವಿದ್ಯಾಲಯದ 210 ಜನ ವಿದ್ಯಾರ್ಥಿಗಳಿಗೆ ತಿಂಗಳಲ್ಲಿ 3 ದಿನ ಉಚಿತ ತಬಲಾ ಶಿಕ್ಷಣ ನೀಡುತ್ತಿದ್ದಾರೆ. ಹಾಗೆಯೇ ಯಾವುದೇ ಕಾರ್ಯಕ್ರಮದಲ್ಲಿ ಅವರು ತಮ್ಮ ತಬಲಾ ವಾದ್ಯದ ಸೇವೆಯನ್ನು ಉಚಿತವಾಗಿ ನೀಡುತ್ತಾರೆ ಎಂದು ತಿಳಿದು ಬಂದಿದೆ.







