ಕನ್ನಡ ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡುವ ಮೂಲಕ ಮೂಲಭೂತ ಸೌಕರ್ಯ ಒದಗಿಸಿ ಕೊಡಬೇಕಾಗಿದೆ : ಪ್ರೊ.ಪುರುಷೋತ್ತಮ ಬಿಳಿಮಲೆ

ಬೀದರ್ : ಕನ್ನಡ ವಿಷಯದಲ್ಲಿ ಅನೇಕ ವಿದ್ಯಾರ್ಥಿಗಳು ಅನುತೀರ್ಣರಾಗುತ್ತಿದ್ದು, ಇದಕ್ಕೆ ಕಾರಣಗಳು ಹುಡಕಬೇಕಾಗಿದೆ. ಸರ್ಕಾರ ಕನ್ನಡ ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡುವುದರ ಮೂಲಕ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ತಿಳಿಸಿದರು.
ಇಂದು ಕರ್ನಾಟಕ ಸಾಹಿತ್ಯ ಸಂಘ ಆಯೋಜಿಸುವ ಕನ್ನಡ ಶಾಲೆಗಳ ಸ್ಥಿತಿ ಗತಿ ಪರಿಹಾರೋಪಾಯಗಳು ಸಂವಾದ ಗೋಷ್ಠಿ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಶಿಕ್ಷಣ ಎಂದರೆ ರಕ್ಷಣೆ, ಭದ್ರತೆ, ಪೋಷಣೆ, ಆಧಾರ, ಜೀವನ, ಬದುಕು, ಅನ್ನ, ಸುಖ, ಶಾಂತಿ ನೆಮ್ಮದಿ ಇತ್ಯಾದಿ ಅರ್ಥಗಳಿವೆ. ಈ ಅರ್ಥಗಳಿಗೆ ಪೂರಕವಾಗುವಂಥ ಕನ್ನಡ ಪಠ್ಯಪುಸ್ತಕಗಳು ಸಿದ್ಧಪಡಿಸಬೇಕಾಗಿದೆ ಎಂದರು.
ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಎಲ್ಲ ವಲಯಗಳಿಗೆ ಅನುಕೂಲತೆಗಳು ದೊರಕಬೇಕು. ಸರ್ಕಾರದ ನಿಲುವು ಅಚಲವಾಗಿದೆ. ಎಸ್‌ಇಪಿ ಜಾರಿಗೆ ಬರಬೇಕು. ಇದರಿಂದ ಕನ್ನಡ ಉಳಿದು ಬೆಳೆಯುತ್ತದೆ. 55 ಸಾವಿರ ಶಿಕ್ಷಕರ ಹುದ್ದೆಗಳು ಸರ್ಕಾರ ಕೂಡಲೇ ಭರ್ತಿ ಮಾಡಬೇಕು. ಆ ದಿಶೆಯಲ್ಲಿ ಪ್ರಾಧಿಕಾರ ಸರ್ಕಾರದ ಗಮನ ಸೆಳೆದಿದೆ. ಕನ್ನಡ ಕಟ್ಟುವಲ್ಲಿ ಸರ್ಕಾರ, ಶಿಕ್ಷಣ ಸಂಸ್ಥೆಗಳು, ಅಧಿಕಾರಿಗಳು, ಪಾಲಕ ಪೋಷಕರ ಸಹಾಯ, ಸಹಕಾರ, ದೂರದೃಷ್ಟಿ ಅವಶ್ಯಕವಾಗಿದೆ ಎಂದು ಹೇಳಿದರು.
ಅಖಿಲ ಕರ್ನಾಟಕ ಅನುದಾನಿತ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ರಾಜ್ಯಾಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಅವರು ಮಾತನಾಡಿ, ಕರ್ನಾಟಕದಲ್ಲಿ 9 ರಿಂದ 10 ವರ್ಷಗಳಿಂದ ಖಾಸಗಿ ಕನ್ನಡ ಶಾಲೆಗಳು ಮುಚ್ಚುತ್ತಿದ್ದಾರೆ. ಸರ್ಕಾರದ ವಿಪರೀತ ಕಠಿಣ ನಿಯಮಗಳು ಇವುಗಳಿಂದ ಕನ್ನಡ ಶಾಲೆಗಳು ಸೋತು ಸೊರಗುತ್ತಿವೆ. ಇವತ್ತು ನಮ್ಮ ಮಾತೃಭಾಷೆ ಉಳಿದು ಬೆಳೆಯಬೇಕು. ಅನುದಾನಿತ ಕನ್ನಡ ಶಾಲಾ ಕಾಲೇಜುಗಳಲ್ಲಿ ಖಾಲಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು. ಕನ್ನಡ ಶಾಲೆಗಳನ್ನು ಇಂಗ್ಲೀಷ ಮಾಧ್ಯಮವಾಗಿ ಪರಿವರ್ತನೆ ಮಾಡುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಚಿಂತಕರಾದ ಡಾ.ಕಾಶಿನಾಥ ಚೆಲ್ವಾ, ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಪ್ರೊ. ಜಗನ್ನಾಥ ಹೆಬ್ಬಾಳೆ, ಎಸ್.ಬಿ. ಕುಚಬಾಳ, ಕರ್ನಾಟಕ ಸಾಹಿತ್ಯ ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ, ಜಂಟಿ ಕಾರ್ಯದರ್ಶಿ ಡಾ. ರಾಜಕುಮಾರ್ ಹೆಬ್ಬಾಳೆ, ಡಾ.ಅಶೋಕ್ ಕೋರೆ ಹಾಗೂ ಡಾ.ಸುರೇಖಾ ಬಿರಾದಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







