ಕಾರುಣ್ಯ ಸಂಘವು ಬಡವರ, ಸಣ್ಣ ವ್ಯಾಪಾರಿಗಳ ಆರ್ಥಿಕ ಅಭಿವೃದ್ಧಿಗೆ ನೆರವಾಗುತ್ತಿದೆ : ಸಚಿವ ರಹೀಂ ಖಾನ್

ಬೀದರ್ : ಕಾರುಣ್ಯ ಸಂಘವು ಬಡವರ, ಸಣ್ಣ ವ್ಯಾಪಾರಿಗಳ ಆರ್ಥಿಕ ಅಭಿವೃದ್ಧಿಗೆ ನೆರವಾಗುತ್ತಿದೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಅವರು ತಿಳಿಸಿದರು.
ಕಾರುಣ್ಯ ಸೌಹಾರ್ದ ಸಹಕಾರಿ ಸಂಘ ನಿಯಮಿತ ವತಿಯಿಂದ ನಗರದ ಮೊಘಲ್ ಗಾರ್ಡನ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಮುದಾಯ ಸಂಪರ್ಕ, ಮಿಷನ್ ಮತ್ತು ವಿಜನ್ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ಬೀದರ್ ಕಾರುಣ್ಯ ಸಂಘವು ಕಡಿಮೆ ಅವಧಿಯಲ್ಲಿಯೇ ಅಭಿವೃದ್ಧಿ ಸಾಧಿಸಿರುವುದು ಆಶ್ಚರ್ಯ ಹಾಗೂ ಸಂತಸ ಉಂಟು ಮಾಡಿದೆ. ಈ ಸಂಘವು ಬಡವರ ಹಾಗೂ ಸಣ್ಣ ವ್ಯಾಪಾರಿಗಳ ಆರ್ಥಿಕ ಅಭಿವೃದ್ಧಿಗೆ ನೆರವಾಗುತ್ತಿದೆ ಎಂದು ಹೇಳಿದರು.
ಸಹುಲತ್ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಅಬ್ದುಲ್ ಜಬ್ಬಾರ್ ಸಿದ್ದಿಕಿ ಅವರು ಮಾತನಾಡಿ, ಬಡ ಜನರಲ್ಲಿ ಪ್ರಾಮಾಣಿಕತೆ ಹೆಚ್ಚಿರುತ್ತದೆ. ಬೀದರ್ ಕಾರುಣ್ಯ ಸಹಕಾರಿ ಸಂಸ್ಥೆಯ ಬಡವರು ಹಾಗೂ ಸಣ್ಣ ವ್ಯಾಪಾರಿಗಳ ಸಾಲ ಮರು ಪಾವತಿ ಪ್ರಮಾಣ ಶೇ.98 ರಷ್ಟಿದೆ ಎಂದು ತಿಳಿಸಿದರು.
ದೇಶದಲ್ಲಿ ಬಡ್ಡಿ ರಹಿತ ಸಹಕಾರ ಸಂಘಗಳು 14 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿವೆ. ಒಟ್ಟು 47 ಶಾಖೆಗಳಿದ್ದು, 1.25 ಲಕ್ಷ ಕುಟುಂಬಗಳು ಈ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿವೆ. ಪ್ರತಿನಿತ್ಯ ಈ ಸಂಸ್ಥೆಗಳು ಸುಮಾರು 1.5 ಕೋಟಿ ರೂ. ನಷ್ಟು ಸಾಲ ನೀಡುತ್ತಿವೆ ಎಂದು ಮಾಹಿತಿ ನೀಡಿದ ಅವರು, ಬಡವರ ಹೆಚ್ಚಿನ ಆದಾಯದ ಪ್ರಮಾಣ ಇತರ ಬ್ಯಾಂಕ್ ಗಳಿಗೆ ಬಡ್ಡಿ ರೂಪದಲ್ಲಿ ಹೋಗುತ್ತದೆ. ಆದರೆ ನಮ್ಮ ಸಹಕಾರಿ ಸಂಘಗಳು ಬಡವರಿಗೆ ಬಡ್ಡಿ ರಹಿತವಾಗಿ ಸಾಲ ನೀಡುತ್ತಿವೆ ಎಂದರು.
ಸಂಘದ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಮುಜ್ತಬಾ ಖಾನ್ ಅವರು ಮಾತನಾಡಿ, ಸಂಘವು 7 ವರ್ಷಗಳ ಅವಧಿಯಲ್ಲಿ ಸಣ್ಣ ವ್ಯಾಪಾರಿಗಳಿಗೆ 60 ಕೋಟಿ ರೂ. ಹಾಗೂ 40 ಲಕ್ಷ ರೂ. ವೈಯಕ್ತಿಕ ಸಾಲ ವಿತರಿಸಿದೆ. 3,500 ಕುಟುಂಬಗಳು ಸಂಘದೊಂದಿಗೆ ಜೋಡಣೆಯಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮುಹಮ್ಮದ್ ರಫೀಕ್ ಅಹಮ್ಮದ್, ಡಿಸಿಸಿ ಬ್ಯಾಂಕ್ ನಿವೃತ್ತ ಅಧಿಕಾರಿ ಬಿ.ಎಸ್. ಕುದುರೆ, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್, ಜಮಾ ಅತೆ ಇಸ್ಲಾಮಿ ಹಿಂದ್ ಬೀದರ್ ಘಟಕದ ಅಧ್ಯಕ್ಷ ಮುಹಮ್ಮದ್ ಮೌಝಂ, ರಹಮತ್ ಉಲ್ಲಾ ಖಾನ್, ಪ್ರಾಚಾರ್ಯ ಮುಹಮ್ಮದ್ ನಿಜಾಮುದ್ದೀನ್, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಸಂಘದ ಉಪಾಧ್ಯಕ್ಷ ಎಹ್ತೆಶಾಮ್ ಉಲ್ ಹಕ್, ಸಿಇಒ ಮಹಮ್ಮದ್ ಮಸಿಯುದ್ದೀನ್, ಡಾ. ಸೈಯದ್ ಹುಸಾಮುದ್ದೀನ್ ಉಜೇರ್, ಪ್ರಮುಖರಾದ ಮಹಮ್ಮದ್ ಆಸಿಫುದ್ದೀನ್, ಶೇಖರ್ ಚೌವ್ಹಾಣ್, ಅಬ್ದುಲ್ ಸಲಾಂ, ಮುಬಾಶಿರ್ ಸಿಂದೆ, ಮಹಮ್ಮದ್ ಅಕ್ರಂ ಅಲಿ, ಅಶ್ಫಾಕ್ ಅಹಮ್ಮದ್, ಅಸ್ಮಾ, ಸಬಿಯಾ ಖಾನಂ, ಅಹಮ್ಮದ್ ಸೇಠ್ ಹಾಗೂ ಶೇಖ್ ಸಿರಾಜುದ್ದೀನ್ ಸೇರಿದಂತೆ ಇತರರು ಇದ್ದರು.







